ಬಾಸ್ಮತಿ ಅಕ್ಕಿಗೆ ಹೇಗೆ ಸುವಾಸನೆ ಬರುತ್ತದೆ..?; ಇದನ್ನು ಬೆಳೆಯಲು ವಾತಾವರಣ ಹೇಗಿರಬೇಕು..?
ಬೆಂಗಳೂರು; ಹೂವಿನಿಂದ ಸುವಾಸನೆ ಬರೋದು ಗೊತ್ತು… ಅದೇ ರೀತಿಯ ಪರಿಮಳ ಅನ್ನದಿಂದಲೂ ಬರುತ್ತದೆ ಅನ್ನೋದೂ ಗೊತ್ತು.. ಯಾಕಂದ್ರೆ ಬಾಸ್ಮತಿ ಅಕ್ಕಿಯ ಪರಿಮಳದ ಬಗ್ಗೆಯೂ ಎಲ್ಲರಿಗೂ ಗುತ್ತೇ ಇದೆ. ಆದ್ರೆ ಬಾಸ್ಮತಿ ಅಕ್ಕಿಯಿಂದ ಈ ಸುವಾಸನೆ ಹೇಗೆ ಬರುತ್ತದೆ..? ಇದಕ್ಕೆ ಕಾರಣ ಏನು ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಅಂದಹಾಗೆ ಪ್ರಪಂಚದಾದ್ಯಂತ ಸುವಾಸನೆ ಬರುವ ಅಕ್ಕಿಯ ತಳಿಗಳು ಹತ್ತಾರಿವೆ. ಆದ್ರೆ, ಬಾಸುಮತಿಯನ್ನು ಕ್ವೀನ್ ಆಫ್ ಆರೋಮಾಟಿಕ್ ರೈಸ್ ಎಂದು ಕರೆಯುತ್ತಾರೆ.
ಬಾಸುಮತಿ ಪರಿಮಳ ಸೂಸೋಕ್ಕೆ ಕಾರಣಗಳೇನು ಗೊತ್ತಾ..?
ಆರೊಮ್ಯಾಟಿಕ್ ಅಕ್ಕಿ ಪ್ರಭೇದಗಳಲ್ಲಿ ಇರುವ ಕೆಲವು ಜೀನ್ಗಳು ಅವುಗಳ ಪರಿಮಳಕ್ಕೆ ಕಾರಣವಾಗುತ್ತವೆ. ಬಾಸ್ಮತಿಯು “ಬೀಟೈನ್ ಅಲ್ಡಿಹೈಡ್ ಡಿಹೈಡ್ರೋಜಿನೇಸ್ (BADH2)” ಎಂಬ ಜೀನ್ ಅನ್ನು ಹೊಂದಿದೆ. ಈ ಜೀನ್ನಿಂದಾಗಿ, ಬಾಸ್ಮತಿಯಲ್ಲಿ “2-ಅಸಿಟೈಲ್-1-ಪೈರೊಲೀನ್ (2AP)” ಎಂಬ ಸಂಯುಕ್ತವು ರೂಪುಗೊಳ್ಳುತ್ತದೆ. ಇದು ಅದಕ್ಕೆ ಪರಿಮಳವನ್ನು ನೀಡುತ್ತದೆ. ವಿವಿಧ ರೀತಿಯ ಜೀನ್ಗಳು ಮತ್ತು ರಾಸಾಯನಿಕ ಸಂಯುಕ್ತಗಳು ಪ್ರತಿಯೊಂದು ವಿಧದ ಆರೊಮ್ಯಾಟಿಕ್ ಅಕ್ಕಿಗೆ ವಿಭಿನ್ನ ಪರಿಮಳವನ್ನು ನೀಡುತ್ತವೆ.
ಆರೊಮ್ಯಾಟಿಕ್ ಅಕ್ಕಿಯ ಸುವಾಸನೆಯು ಮುಖ್ಯವಾಗಿ ಮೂರು ಅಂಶಗಳನ್ನು ಅವಲಂಬಿಸಿರುತ್ತದೆ.
೧.ಭೂಮಿ ವಿಧ
೨.ಬೆಳೆಸುವ ವಿಧಾನ
೩.ವಾತಾವರಣ
ಬಾಸ್ಮತಿ ಅಕ್ಕಿ ಹುಟ್ಟಿದ್ದು ಎಲ್ಲಿ ಗೊತ್ತಾ..?
ಭಾರತ ಉಪಖಂಡವನ್ನು ಆಳಿದ ಹಲವಾರು ರಾಜರುಗಳು ಮನಸ್ಸನ್ನು ಈ ಬಾಸ್ಮತಿ ಅಕ್ಕಿ ದೋಚಿತ್ತು. ಸುಲ್ತಾನರು ಬಾಸ್ಮತಿ ಅಕ್ಕಿಗೆ ತಲೆಬಾಗುತ್ತಿದ್ದರು. ಬಾಸ್ಮತಿಯಂತಹ ಆರೋಮಾಟಿಕ್ ಅಕ್ಕಿಯ ಮೂಲ ಭಾರತ, ಪಾಕಿಸ್ತಾ, ನೇಪಾಲ್ ಹಾಗೂ ದೇಶಗಳಿಂದ ಕೂಡಿದ ಸಬ್ ಹಿಮಾಲಯನ್ ಪ್ರಾಂತ್ಯ ಅನ್ನೋದು ಅಧ್ಯಯನದಿಂದ ಗೊತ್ತಾಗಿದೆ. ಇಲ್ಲಿಂದ ಇಡೀ ಏಷ್ಯಾ ಖಂಡಕ್ಕೆ ಈ ಆರೋಮಾಟಿಕ್ ಅಕ್ಕಿ ಪರಿಚಯವಾಗಿದೆ.
ಕಾಲಾನಂತರದಲ್ಲಿ, ಆರೊಮ್ಯಾಟಿಕ್ ಅಕ್ಕಿಯ ಪ್ರಭೇದಗಳು ಪ್ರದೇಶಗಳು ಮತ್ತು ಹವಾಮಾನವನ್ನು ಅವಲಂಬಿಸಿ ವಿಕಸನಗೊಂಡಿವೆ. ಪಂಜಾಬಿ ಕವಿ ವಾರಿಸ್ ಶಾ ಅವರು 1766 ರಲ್ಲಿ ಬರೆದ ‘ಹೀರ್ ರಾಮ್ಜಾ’ ಎಂಬ ಕವಿತೆಯಲ್ಲಿ ಬಾಸ್ಮತಿ ಹೆಸರನ್ನು ಉಲ್ಲೇಖಿಸಿದ್ದಾರೆ.
ಬಾಸ್ಮತಿ ಎಂದರೆ “ಪರಿಮಳ”
ರಾಜಸ್ಥಾನದ ಉದಯಪುರದಲ್ಲಿ ನಡೆದ ಪುರಾತತ್ತ್ವ ಶಾಸ್ತ್ರದ ಉತ್ಖನನಗಳು ಕ್ರಿ.ಪೂ. 2,000-1,600 ರ ನಡುವಿನ ಉದ್ದದ ಭತ್ತದ ಧಾನ್ಯಗಳ ಕುರುಹುಗಳನ್ನು ಕಂಡುಕೊಂಡಿವೆ. ಅವರು ಬಾಸ್ಮತಿಯ ಹಿಂದಿನವರು ಎಂದು ನಂಬಲಾಗಿದೆ.
ಬಾಸ್ಮತಿ ಅಕ್ಕಿ ಹಳೆಯದಾದಷ್ಟೂ ರುಚಿ ಹೆಚ್ಚು..!
ಬಾಸ್ಮತಿಯನ್ನು ಹೆಚ್ಚು ಸಮಯ ಸಂಗ್ರಹಿಸಲಾಗುತ್ತದೆ. ಹೆಚ್ಚು ದಿನ ಸಂಗ್ರಹಿಸಿದಷ್ಟೂ ಅದು ಹೆಚ್ಚು ಪರಿಮಳಯುಕ್ತವಾಗುತ್ತದೆ ಹಾಗೂ ರುಚಿಯೂ ಹೆಚ್ಚುತ್ತದೆ. ಹೆಚ್ಚು ದಿನ ಶೇಖರಣೆ ಮಾಡುವುದರಿಂದ ಬೀಜಗಳಲ್ಲಿನ ತೇವಾಂಶ ಕಡಿಮೆ ಮಾಡುತ್ತದೆ. ಬೇಯಿಸಿದಾಗ ಅವು ಹೊರಸೂಸುವ ಪರಿಮಳ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ, ಅನ್ನವೂ ಮುದ್ದೆಯಾಗುವುಲ್ಲ. ಒಂದರಿಂದ ಎರಡೂವರೆ ವರ್ಷ ಸಂಗ್ರಹಿಸಿಟ್ಟ ಹಳೆದ ಬಾಸ್ಮತಿ ಅಕ್ಕಿಗೆ ರುಚಿ ಹೆಚ್ಚಂತೆ. ಹೆಚ್ಚು ದಿನ ಶೇಖರಣೆ ಮಾಡಿದರೆ ಅಕ್ಕಿ ಕಾಳುಗಳು ಸ್ವಲ್ಪ ಗೋಲ್ಡನ್ ಅಥವಾ ಗೋಧಿ ಬಣ್ಣಕ್ಕೆ ತಿರುಗುತ್ತವೆ. ಹೀಗೆ ಬಾಸ್ಮತಿ ಅನೇಕ ವಿಶಿಷ್ಟ ಗುಣಗಳನ್ನು ಹೊಂದಿದೆ. ಅಕ್ಕಿ ಉತ್ತಮ ವಾಸನೆಯನ್ನು ಹೊರಸೂಸುತ್ತದೆ. ಅನ್ನದ ರುಚಿ ಸಿಹಿಯಾಗಿರುತ್ತದೆ. ಅಡುಗೆ ಮಾಡಿದ ನಂತರ, ಅಕ್ಕಿಯ ಅಗಳುಗಳು ತೆಳ್ಳಗಿರುತ್ತವೆ ಮತ್ತು ಸುಮಾರು 12 ರಿಂದ 20 ಮಿಲಿಮೀಟರ್ ಉದ್ದವಿರುತ್ತವೆ. ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ.