ನಮ್ಮ ಕಾಲದ ಟೆಂಡರ್‌ಗಳ ತನಿಖೆಗೆ ನನ್ನ ಅಭ್ಯಂತರವಿಲ್ಲ; ಸಿದ್ದರಾಮಯ್ಯ
ಮೈಸೂರು: ಕಾಂಗ್ರೆಸ್ ಸರ್ಕಾರದ ಅವದಿಯಲ್ಲಿ ನಡೆದಿರುವ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಯಲಿ, ಇದಕ್ಕೆ ನಮ್ಮ ಆಕ್ಷೇಪ ಏನೂ ಇಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯ ಟೆಂಡರ್ ಗಳ ಬಗ್ಗೆಯೂ ತನಿಖೆ ನಡೆಸುವ ಮುಖ್ಯಮಂತ್ರಿಗಳ ಹೇಳಿಕೆಗೆ ಈ ರೀತಿ ಪ್ರತಿಕ್ರಿಯೆ ನೀಡಿದರು.
ಉಪ್ಪು ತಿಂದವರು ನೀರು ಕುಡಿಯಲೇ ಬೇಕು. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ. ಅವರು ಯಾವುದೇ ಪಕ್ಷದವರಾಗಲಿ ಎಂದ ಸಿದ್ದರಾಮಯ್ಯ, ವಿಧಾನ ಪರಿಷತ್ತಿನ ಚುನಾವಣೆಯಲ್ಲಿ
ಜೆಡಿಎಸ್ ಜೊತೆಗೆ ಹೊಂದಾಣಿಕೆ ಇಲ್ಲ. ನಾವು ಯಾವ ಕ್ಷೇತ್ರದಲ್ಲೂ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ ಸ್ಪಷ್ಟಪಡಿಸಿದರು.
ನಮ್ಮ ಬೆಂಬಲಿತರಿಗೆ ಪಕ್ಷದ ಅಭ್ಯರ್ಥಿಗೆ ಸಿಂಗಲ್ ವೋಟ್ ಹಾಕಲು ಸೂಚನೆ ಕೊಟ್ಟಿದ್ದೇನೆ. ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಇದ್ದೇ ಇದೆ. ಈ ಚುನಾವಣೆಯಲ್ಲಿ ಮಾತ್ರ ಅಲ್ಲ. ವಿಧಾನಸಭೆಯ ಎರಡು ಕ್ಷೇತ್ರಗಳಿಗೆ
ಇತ್ತೀಚೆಗೆ ನಡೆದ ಉಪ ಚುನಾವಣೆ ಸೇರಿದಂತೆ, ಎಲ್ಲ ಚುನಾವಣೆಗಳಲ್ಲೂ ಅವರಿಬ್ಬರೂ ಒಳ ಒಪ್ಪಂದ ಮಾಡಿಕೊಂಡೇ ಚುನಾವಣೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಅಪಾದನೆ ಮಾಡಿದರು.