ವಿಧಾನಸಭೆಯಲ್ಲಿ ರಕ್ತ ಸಂಬಂಧಿಗಳದ್ದೇ ಕಾರುಬಾರು; ಅಪ್ಪ-ಮಗ, ಅಪ್ಪ-ಮಗಳು ಶಾಸಕರು..!
ಬೆಂಗಳೂರು; ಈ ಬಾರಿ ಒಂದೇ ಕುಟುಂಬದವರು, ರಕ್ತ ಸಂಬಂಧಿಗಳೇ ಹೆಚ್ಚಾಗಿ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ. ಅಪ್ಪ-ಮಗ, ಅಪ್ಪ-ಮಗಳ ಹೀಗೆ ರಕ್ತ ಸಂಬಂಧಿಕರೇ ಗೆಲುವು ಸಾಧಿಸಿದ್ದು, ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಇಂತಹ ಜೋಡಿಗಳು ಹೆಚ್ಚಿವೆ.
ಎ. ಮಂಜು- ಮಂಥರ್ ಗೌಡ, ಅಪ್ಪ ಜೆಡಿಎಸ್ ಶಾಸಕ, ಮಗ ಕಾಂಗ್ರೆಸ್ ಶಾಸಕ
ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈ ಬಾರಿ ಚುನಾವಣೆ ಸಮಯದಲ್ಲಿ ಅವರು ಜೆಡಿಎಸ್ಗೆ ಹೋಗಿದ್ದರು. ಹಾಸನದ ಅರಕಲಗೂಡಿನಿಂದ ಎ.ಮಂಜು ಸ್ಪರ್ಧೆ ಮಾಡಿದ್ದರು. ಅವರಿಗೆ ಗೆಲುವು ಸಿಕ್ಕಿದೆ. ಇನ್ನು ಇದೇ ಎ.ಮಂಜು ಅವರ ಪುತ್ರ ಮಂಥರ್ ಗೌಡ ಅವರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಅಲ್ಲೂ ಕೂಡಾ ಡಾ.ಮಂಥರ್ ಗೌಡ ಗೆದ್ದಿದ್ದಾರೆ. ಹೀಗಾಗಿ ಅಪ್ಪ-ಮಗ ಇಬ್ಬರೂ ಈ ಬಾರಿ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ- ಎಸ್.ಎಸ್.ಮಲ್ಲಿಕಾರ್ಜುನ, ದಾವಣಗೆರೆಯಲ್ಲಿ ಗೆದ್ದ ಅಪ್ಪ-ಮಗ
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದಾರೆ. 92 ವರ್ಷದ ಶಾಮನೂರು ಶಿವಶಂಕರಪ್ಪ ಈ ಬಾರಿ ಅತ್ಯಂತ ಹಿರಿಯ ಶಾಸಕರೆನಿಸಿಕೊಂಡಿದಾರೆ. ಅವರು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಇನ್ನು ದಾವಣಗೆರೆ ಉತ್ತರ ಕ್ಷೇತ್ರದಿಂದ ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್ ಈ ಬಾರಿ ಜಯ ಸಾಧಿಸಿದ್ದಾರೆ. ಹೀಗಾಗಿ ಈ ಈ ಅಪ್ಪ-ಮಕ್ಕಳಿಬ್ಬರೂ ವಿಧಾನಸೌಧ ಪ್ರವೇಶ ಮಾಡಲಿದ್ದಾರೆ.
ಎಂ.ಕೃಷ್ಣಪ್ಪ-ಪ್ರಿಯಾಕೃಷ್ಣ
2013ರ ಚುನಾವಣೆಯಲ್ಲಿ ವಿಜಯನಗರದ ಎಂ.ಕೃಷ್ಣಪ್ಪ ಹಾಗೂ ಅವರ ಪ್ರಿಯಾಕೃಷ್ಣ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶ ಮಾಡಿದ್ದರು. ಆದ್ರೆ 2018ರಲ್ಲಿ ಗೋವಿಂದ ರಾಜನಗರದಲ್ಲಿ ಪ್ರಿಯಾಕೃಷ್ಣ ಸೋಲನುಭವಿಸಿದ್ದರು. ಆದ್ರೆ ಈ ಬಾರಿ ಇಬ್ಬರೂ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೃಷ್ಣಪ್ಪ, ಗೋವಿಂದರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪ್ರಿಯಾಕೃಷ್ಣ ಇಬ್ಬರೂ ಗೆದ್ದಿದ್ದಾರೆ. ಇಬ್ಬರೂ ಒಟ್ಟಿಗೆ ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ.
ಕೆ.ಎಚ್.ಮುನಿಯಪ್ಪ-ರೂಪಾ ಶಶಿಧರ್
ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಗೆದ್ದಿದ್ದ ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಹೀಗಾಗಿ ಅವರು ಈ ಬಾರಿ ರಾಜ್ಯ ರಾಜಕಾರಣಕ್ಕೆ ಬಂದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ದೇವಹನಹಳ್ಳಿ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಅಲ್ಲಿ ಮುನಿಯಪ್ಪ ಗೆಲುವು ಸಾಧಿಸಿದ್ದಾರೆ. ಇನ್ನು ಕೆಜಿಎಫ್ನಲ್ಲಿ ಮುನಿಯಪ್ಪ ಮಗಳು ರೂಪಾ ಶಶಿಧರ್ ರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ರೂಪಾ ಕೂಡಾ ಈ ಬಾರಿ ಗೆದ್ದಿದ್ದಾರೆ. ಹೀಗಾಗಿ ಅಪ್ಪ-ಮಗಳಿಬ್ಬರೂ ಈ ಬಾರಿ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.
ಜಿ.ಟಿ.ದೇವೇಗೌಡ-ಜಿ.ಡಿ.ಹರೀಶ್ ಗೌಡ
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದ ಜಿ.ಟಿ.ದೇವೇಗೌಡರು ಈ ಬಾರಿಯೂ ಅದೇ ಕ್ಷೇತ್ರದಿಂದ ಗೆದ್ದು ಬೀಗಿದ್ದಾರೆ. ಇನ್ನು ಈ ಬಾರಿ ಅವರ ಮಗನಿಗೂ ಟಿಕೆಟ್ ಕೊಡಿಸುವಲ್ಲಿ ಜಿಟಿಡಿ ಯಶಸ್ವಿಯಾಗಿದ್ದಾರೆ. ಹುಣಸೂರಿನಿಂದ ಸ್ಪರ್ಧೆ ಮಾಡಿದ್ದ ಜಿಟಿಡಿ ಮಗ ಹರೀಶ್ ಗೌಡ ಈ ಬಾರಿ ಜೆಡಿಎಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಅಪ್ಪ-ಮಗ ಇಬ್ಬರೂ ವಿಧಾನಸಭೆ ಪ್ರವೇಶಿಸುತ್ತಿದ್ದಾರೆ.