ಛಲ ಬಿಡದ ಕನಕಪುರದ ಬಂಡೆ; ಅಡ್ಡಿ ಆತಂಕ ಮೆಟ್ಟಿನಿಂತ ಟ್ರಬಲ್ ಶೂಟರ್
ಬೆಂಗಳೂರು; ಕಾಂಗ್ರೆಸ್ ಗೆಲುವು ಅಷ್ಟು ಸುಲಭವಾಗಿರಲಿಲ್ಲ… ರಾಜ್ಯ ಕಾಂಗ್ರೆಸ್‌ನ್ನು ಮುನ್ನಡೆಸೋದು ಕೂಡಾ ಅಷ್ಟು ಈಜಿಯಾಗಿರಲಿಲ್ಲ… ಯಾಕಂದ್ರೆ 2018ರಲ್ಲಿ ಕಾಂಗ್ರೆಸ್ ಸೋಪ್ಪಿಕೊಂಡಿತ್ತು.. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿತ್ತು.. ಇದಾದ ಮೇಲೆ ರಾಜ್ಯ ಕಾಂಗ್ರೆಸ್‌ನ್ನು ಮುನ್ನಡೆಸೋಕೆ ಯಾರೂ ರೆಡಿ ಇರಲಿಲ್ಲ.. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ದಿನೇಶ್ ಗುಂಡೂರಾವ್ ಅವರು ನನ್ನ ಕೈಲಿ ಆಗಲ್ಲ ಎಂದು ರಾಜೀನಾಮೆ ಕೊಟ್ಟಿದ್ದರು. ಆಗಿದ್ದ ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಕೂಡಾ ನೈತಿಕ ಹೊಣೆ ಹೊತ್ತು ರಾಜೀನಾಮೆಗೆ ಮುಂದಾಗಿದ್ದರು. ಆಗ ಕರ್ನಾಟಕದಲ್ಲೂ ಕಾಂಗ್ರೆಸ್ ಕತೆ ಮುಗಿದೇ ಹೋಯ್ತು ಎಂಬ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯ ಕಾಂಗ್ರೆಸ್ ನೊಗ ಸಿಕ್ಕಿತ್ತು. ಅದನ್ನು ಸಮರ್ಥವಾಗಿ ಎಳೆದು ಕರ್ನಾಟಕದಲ್ಲಿ ಕಾಂಗ್ರೆಸ್‌ನ್ನು ಸಮೃದ್ಧವಾಗಿ ಬೆಳೆಸುವಲ್ಲಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಅಂದಹಾಗೆ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಲಾಯಿತು. ಪದೇ ಪದೇ ಇಡಿ, ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆಯುತ್ತಿದ್ದರು. ಇದೆಲ್ಲದರ ನಡುವೆಯೂ ಅವರು ಕಾಂಗ್ರೆಸ್‌ಗೆ ನಿಷ್ಠರಾಗಿದ್ದರು. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿಗೆ ನಿಷ್ಟರಾಗಿ ಪಕ್ಷದ ಕೆಲಸ ಮಾಡುತ್ತಾ ಬಂದರು. ಕಾಂಗ್ರೆಸ್ ಹೈಕಮಾಂಡ್ ಕೂಡಾ ಡಿ.ಕೆ.ಶಿವಕುಮಾರ್ ವಿರುದ್ಧ ಎಷ್ಟೇ ಕೇಸ್‌ಗಳು ದಾಖಲಾದರೂ, ಅವರ ವಿರುದ್ಧ ಎಷ್ಟೇ ಆರೋಪಗಳು ಬಂದರೂ ಡಿ.ಕೆ.ಶಿವಕುಮಾರ್ ಪರವಾಗಿ ನಿಲ್ಲುತ್ತಾ ಬಂದಿತ್ತು. ಇದೆಲ್ಲದರ ಫಲವಾಗಿ ಇಂದು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.
ಕೊರೊನಾ ಸಮಯದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಅದು ಕಾಂಗ್ರೆಸ್ ಸಂಕಷ್ಟದ ಸಮಯ. ಜನರಿಗೂ ಕೊರೊನಾದಿಂದಾಗಿ ಸಂಕಷ್ಟ ಎದುರಿಸುತ್ತಿದ್ದರು. ಆಗ ಜನರ ಪರವಾಗಿ ಡಿ.ಕೆ.ಶಿವಕುಮಾರ್ ನಿಂತುಕೊಂಡರು. ಲಾಕ್ ಡೌನ್‌ನಿಂದಲಾಗಿ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡೋದಕ್ಕೆ ಆಗುತ್ತಿರಲಿಲ್ಲ. ಆಗ ಡಿ.ಕೆ.ಶಿವಕುಮಾರ್ ರೈತರ ಬಳಿಗೆ ಹೋದರು. ಅವರ ಕಷ್ಟಗಳಿಗೆ ದನಿಯಾದರು. ಅಷ್ಟೇ ಅಲ್ಲ, ಲಾಕ್ ಡೌನ್ ಸಮಯದಲ್ಲಿ ಕೆಪಿಸಿಸಿ ಕಚೇರಿಯನ್ನು 24 ಗಂಟೆಯೂ ತೆರೆದಿಟ್ಟು, ಜನರ ಕಷ್ಟಗಳನ್ನು ಅರಿಯುವ, ಅವುಗಳನ್ನು ಪರಿಹರಿಸುವ ಕೆಲಸದಲ್ಲಿ ಡಿ.ಕೆ.ಶಿವಕುಮಾರ್ ನಿರತರಾದರು.
ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊರಿಸಿ ಡಿ.ಕೆ.ಶಿವಕುಮಾರ್ ಹಾಗೂ ಅವರ ಕುಟುಂಬವನ್ನು ಸತತವಾಗಿ ವಿಚಾರಣೆ ನಡೆಸಲಾಗುತ್ತಾ ಬರಲಾಯಿತು. ಅದರಲ್ಲೂ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ದೆಹಲಿಯಿಂದ ಡಿ.ಕೆ.ಶಿವಕುಮಾರ್‌ಗೆ ನೋಟಿಸ್ ಗಳು ಬರುತ್ತಿದ್ದವು. ಆದ್ರೆ ಅವ್ಯಾವುದಕ್ಕೂ ಡಿ.ಕೆ.ಶಿವಕುಮಾರ್ ಹೆದರಲಿಲ್ಲ. ಜೈಲಿಗೆ ಬೇಕಾದರೆ ಹೋಗುತ್ತೇನೆ. ಆದ್ರೆ ನಾನು ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾ ಬಂದಿದ್ದರು. ಬೇರೆಯವರಾಗಿದ್ದರೆ ಕಾನೂನು ಕಂಕಟದಿಂದ ತಪ್ಪಿಸಿಕೊಳ್ಳಲು ಬಿಜೆಪಿ ಕದ ತಟ್ಟುತ್ತಿದ್ದರೇನೋ. ಆದ್ರೆ ಡಿ.ಕೆ.ಶಿವಕುಮಾರ್ ಹಾಗೆ ಮಾಡಲಿಲ್ಲ. ಏನಾದರೂ ಆಗಲಿ. ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳುತ್ತಾ ಬಂದರು.
ಬಂಡೆಯಂತೆ ನಿಂತು ಕಾಂಗ್ರೆಸ್ ಸಂಘಟಿಸಿದ ಡಿ.ಕೆ.ಶಿವಕುಮಾರ್‌ಗೆ ಕೊನೆಗೂ ಜಯ ಸಿಕ್ಕಿದೆ. ಕರ್ನಾಟಕದ ಜನರು ಬಹಳ ಅಭೂತಪೂರ್ವವಾಗಿ ಕಾಂಗ್ರೆಸ್‌ಗೆ ಜಯ ತಂದುಕೊಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಕನಕಪುರದಲ್ಲಿ ಒಂದೂ ಕಾಲು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಸಿಎಂ ಸ್ಥಾನ ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕೂಡಾ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತೋ ನೋಡಬೇಕು.