ಅಮಿತ್ ಶಾ, ಸೋಮಣ್ಣ ವಿರುದ್ಧ ಕಾಂಗ್ರೆಸ್ ನಾಯಕರ ದೂರು
ಬೆಂಗಳೂರು; ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಲಭೆಗಳು ನಡೆಯುತ್ತವೆ ಎಂದು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಅಮಿತ್ ಶಾ ಹಾಗೂ ಸೋಮಣ್ಣ ವಿರುದ್ಧ ದೂರು ನೀಡಿದ್ದಾರೆ. ಬೆಂಗಳೂರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರು, ಅಮಿತ್ ಶಾ ಹಾಗೂ ವಿ.ಸೋಮಣ್ಣ ವಿರುದ್ಧ ದೂರು ನೀಡಿದರು.
ಚುನಾವಣಾ ಪ್ರಚಾರದ ವೇಳೆ ಬಿಜೆಪಿ ನಾಯಕರು ರಾಜ್ಯದಲ್ಲಿ ಕಾಂಗ್ರೆಸ್ಗೆ ಅಧಿಕಾರ ಸಿಕ್ಕರೆ ಗಲಭೆಗಳು ಹಾಗೂ ಘರ್ಷಣೆಗಳು ಹೆಚ್ಚಾಗುತ್ತವೆ ಎಂದು ಮತದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ. ಸೋಲುವ ಭೀತಿಯಿಂದ ಇಂತಹ ಹತಾಶ ಹೇಳಿಕೆ ನೀಡುತ್ತಿದಾರೆ. ಇಂತಹ ಹೇಳಿಕೆಗಳನ್ನು ನೀಡುತ್ತಿರುವ ಅಮಿತ್ ಶಾ ಹಾಗೂ ವಿ.ಸೋಮಣ್ಣ ಅವರನ್ನು ಬಂಧಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.
ಇದೇ ವೇಳೆ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇಂತಹ ಜಾಗದಲ್ಲಿ ಅಮಿತ್ ಶಾ ಜನರಿಗೆ ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಾಗಿ ಅವರು ಪ್ರಚಾರಕ್ಕೆ ಬರದಂತೆ ನಿರ್ಬಂಧ ಹೇರಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ ಎಂದು ಹೇಳಿದರು. ಇನ್ನು ವಿ.ಸೋಮಣ್ಣ ಅವರು ನಾಮಪತ್ರ ವಾಪಸ್ ಪಡೆಯುವಂತೆ ಚಾಮಾಜನಗರ ಜೆಡಿಎಸ್ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದಾರೆ. ಜೊತೆಗೆ ಆಮಿಷವೊಡ್ಡಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಕ್ರಮಕ್ಕೆ ಆಗಹಿಸಲಾಗಿದೆ.