ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ತೊರೆದವರು ಎಷ್ಟು..? ಬಿಜೆಪಿಯಲ್ಲೇ ಉಳಿದವರು ಎಷ್ಟು ಮಂದಿ..?
ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ಪಕ್ಷ ತೊರೆದವರು
============================
1. ಜಗದೀಶ್ ಶೆಟ್ಟರ್, ಮಾಜಿ ಸಿಎಂ, ಲಿಂಗಾಯತ ಸಮುದಾಯದ ನಾಯಕ
ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಾಭ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾದ ಕಾರಣ ಅವರು ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದಾರೆ.
2. ಲಕ್ಷ್ಮಣ ಸವದಿ, ಮಾಜಿ ಉಪಮುಖ್ಯಮಂತ್ರಿ
ಅಥಣಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರೂ ತಮಗೆ ಟಿಕೆಟ್ ವಿಚಾರದಲ್ಲಿ ವಂಚನೆ ಆಯಿತೆಂದು ಬಂಡಾಯವೆದ್ದರು. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಪಕ್ಷಕ್ಕೂ ರಾಜೀನಾಮೆ ನೀಡಿದರು. ಸದ್ಯ ಅವರು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ್ದಾರೆ.
3. ಆರ್.ಶಂಕರ್, ಮಾಜಿ ವಿಧಾನಪರಿಷತ್ ಸದಸ್ಯ
ರಾಣೆ ಬೆನ್ನೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ ಟಿಕೆಟ್ ಸಿಗದಿದ್ದರಿಂದ ಬೇಸತ್ತು ಪರಿಷತ್ ಸ್ಥಾನ ಹಾಗೂ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
4. ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ ಶಾಸಕ
ಮೂಡಿಗೆರೆಯಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಆದ್ರೆ ಟಿಕೆಟ್ ಸಿಗಲಿಲ್ಲ. ಹೀಗಾಗಿ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
5. ವಿಶ್ವನಾಥ ಪಾಟೀಲ್ ಹೆಬ್ಬಾಳ, ಬಿಜೆಪಿ ಮುಖಂಡರು
ಚಿತ್ತಾಪುರ ಕ್ಷೇತ್ರದಿಂದ ಅವರು ಬಿಜೆಪಿ ಟಿಕೆಟ್ ಬಯಸಿದ್ದರು. ಆದ್ರೆ ಅವರಿಗೆ ಟಿಕೆಟ್ ಸಿಗದಿದ್ದರಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
6. ಆಯನೂರು ಮಂಜುನಾಥ್, ಮಾಜಿ ವಿಧಾನಪರಿಷತ್ ಸದಸ್ಯರು
ಆಯನೂರು ಮಂಜುನಾಥ್ ಅವರು ಹಲವು ದಶಕಗಳಿಂದ ಬಿಜೆಪಿಯಲ್ಲಿದ್ದರು. ಆದ್ರೆ, ಶಿವಮೊಗ್ಗ ಕ್ಷೇತ್ರದಿಂದ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ತೊರೆದ ಅವರು ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ
7. ಪೈಟರ್ ರವಿ, ನಾಗಮಂಗಲ ಟಿಕೆಟ್ ಆಕಾಂಕ್ಷಿ
ರೌಡಿ ಶೀಟರ್ ಫೈಟರ್ ರವಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದರು. ಇದು ಪ್ರತಿಪಕ್ಷಗಳ ಅಸ್ತ್ರವಾಗಿತ್ತು. ಮೋದಿ ಮಂಡ್ಯಕ್ಕೆ ಭೇಟಿ ನೀಡಿದಾಗಿ ಫೈಟರ್ ರವಿ ಮೋದಿಯವರನ್ನು ಭೇಟಿ ಮಾಡಿದ್ದರು. ಆಗ ವೈರಲ್ ಆಗಿದ್ದ ಫೋಟೋ ಇಟ್ಟುಕೊಂಡು ಪ್ರತಿಪಕ್ಷಗಳು ಕಿಡಿಕಾರಿದ್ದವು. ಇದಾದ ಮೇಲೆ ಫೈಟರ್ ರವಿಗೆ ಟಿಕೆಟ್ ನಿರಾಕರಿಸಲಾಗಿದೆ. ಹೀಗಾಗಿ ಫೈಟರ್ ರವಿ ನಾಗಮಂಗಲದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
8. ಎನ್.ಆರ್.ಸಂತೋಷ್, ಬಿಎಸ್ವೈ ಆಪ್ತ
ಎನ್.ಆರ್.ಸಂತೋಷ್ ಬಿ.ಎಸ್.ಯಡಿಯೂರಪ್ಪ ಆಪ್ತರು. ಇವರು ಅರಸೀಕೆರೆಯಲ್ಲಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟಿಸಿದ್ದರು. ಆದ್ರೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿದೆ. ಹೀಗಾಗಿ ಅವರು ಜೆಡಿಎಸ್ ಸೇರಿ, ಜೆಡಿಎಸ್ನಿಂದ ಕಣಕ್ಕಿಳಿದಿದ್ದಾರೆ.
ಟಿಕೆಟ್ ಸಿಗದಿದ್ದರೂ ಬಿಜೆಪಿಯಲ್ಲೇ ಉಳಿದವರು
================================
1. ಕೆ. ರಘುಪತಿ ಭಟ್, ಉಡುಪಿ ಶಾಸಕ
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದವರು. ಈ ಬಾರಿಯೂ ಟಿಕೆಟ್ ಬಯಸಿದ್ದರು. ಆದ್ರೆ ಬಿಜೆಪಿ ಟಿಕೆಟ್ ನಿರಾಕರಣೆ ಮಾಡಿತು. ಇದ್ರಿಂದ ರಘುಪತಿ ಭಟ್ ಮೊದಲು ಅಪೃಪ್ತಿ ವ್ಯಕ್ತಪಡಿಸಿದ್ದರು. ಆದ್ರೆ, ಹರಿಯರ ಸಂಧಾನದ ನಂತರ ಪಕ್ಷದಲ್ಲೇ ಉಳಿದಿದ್ದಾರೆ. ಹಾಲಿ ಅಭ್ಯರ್ಥಿ ಪರ ಪ್ರಚಾರಕ್ಕೆ ನಿಂತಿದ್ದಾರೆ.
2. ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಕುಂದಾಪುರ
ಹಾಲಾಡಿ ಶ್ರೀನಿವಾಸ ಶೆಟ್ಟಿ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸರಳತೆಗೆ ಹೆಸರಾದ ಇವರು, ಟಿಕೆಟ್ ಸಿಗುವುದಿಲ್ಲವೆಂದು ಮೊದಲೇ ಗೊತ್ತಾಗಿ ನನಗೆ ಟಿಕೆಟ್ ಬೇಡ, ಬೇರೆಯವರಿಗೆ ಕೊಡಿ ಎಂದು ಹೇಳಿದರು. ಯಾವುದೇ ಬೇಸರ ಮಾಡಿಕೊಳ್ಳದೆ ಪಕ್ಷದಲ್ಲೇ ಉಳಿದು ಪಕ್ಷದ ಕೆಲಸ ಮುಂದುವರೆಸಿದ್ದಾರೆ.
3. ಎಸ್.ಅಂಗಾರ, ಸುಳ್ಯ
ಎಸ್.ಅಂಗಾರ ಸುಳ್ಯ ಕ್ಷೇತ್ರದಿಂದ 1994ರಿಂದಲೂ ಗೆಲ್ಲುತ್ತಲೇ ಬಂದಿದ್ದಾರೆ. ಆದ್ರೆ ಈ ಬಾರಿ ಅವರಿಗೆ ಟಿಕೆಟ್ ಸಿಕ್ಕಿಲ್ಲ. ಇದ್ರಿಂದ ಮೊದಲು ಅವರು ಬೇಸರ ಮಾಡಿಕೊಂಡಿದ್ದರು. ಅನಂತರ ಮುನಿಸಿ ಮರೆತು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
4. ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಈಶ್ವರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರು. ಆದ್ರೆ ಈ ಬಾರಿ ಅವರಿಗೆ ಶಿವಮೊಗ್ಗ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಯಿತು. ಹೀಗಾಗಿ ಅವರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಆದ್ರೆ ಅವರು ಪಕ್ಷದಲ್ಲೇ ಉಳಿದಿದ್ದಾರೆ.
5. ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕ
2018ರಲ್ಲಿ ಪಕ್ಷವನ್ನು ಕ್ಷೇತ್ರದಲ್ಲಿ ಗೆಲ್ಲಿಸಿದವರು. ಈ ಬಾರಿಯೂ ಅವರು ಬೈಂದೂರು ಟಿಕೆಟ್ ಬಯಸಿದ್ದರು. ಆದ್ರೆ ಈ ಬಾರಿ ಅವರಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಆದರೂ ಬೇಸರಿಸಿಕೊಳ್ಳದೆ ಪಕ್ಷದಲ್ಲೇ ಉಳಿದಿದ್ದಾರೆ.
6. ಎಸ್.ಎ.ರಾಮದಾಸ್, ಮಾಜಿ ಸಚಿವ
ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಿಂದ ಸತತವಾಗಿ ಗೆಲ್ಲುತ್ತಾ ಬಂದಿದ್ದ ನಾಯಕರು. ಮಾಜಿ ಸಚಿವರು ಕೂಡಾ. ಈ ಬಾರಿಯೂ ಅವರಿಗೆ ಗೆಲ್ಲುವ ಶಕ್ತಿ ಇತ್ತು. ಆದ್ರೆ, ಪಕ್ಷ ಅವರಿಗೆ ಟಿಕೆಟ್ ನಿರಾಕರಿಸಿದೆ. ಆದರೂ ರಾಮದಾಸ್ ಪಕ್ಷಕ್ಕೆ ನಿಷ್ಟರಾಗಿದ್ದಾರೆ. ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.
7. ಲಾಲಾಜಿ ಮೆಂಡನ್, ಕಾಪು ಕ್ಷೇತ್ರ
ಎರಡು ಬಾರಿ ಶಾಸಕರಾಗಿದ್ದವರು. ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದಿಂದ ಮತ್ತೆ ಟಿಕೆಟ್ ಬಯಸಿದ್ದರು. ಆದ್ರೆ ಈ ಬಾರಿ ಲಾಲಾಜಿ ಮೆಂಡನ್ಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಆದರೂ ಅವರು ಬೇಸರ ಮಾಡಿಕೊಂಡಿಲ್ಲ. ಬದಲಾಗಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ.