ಕನಕಪುರ ತಂತ್ರಕ್ಕೆ ಪ್ರತಿತಂತ್ರ; ಪದ್ಮನಾಭನಗರದಲ್ಲಿ ಅಶೋಕ್ ವಿರುದ್ಧ ಡಿ.ಕೆ.ಸುರೇಶ್..?
ಬೆಂಗಳೂರು; ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕೋದಕ್ಕೆ ಆರ್.ಅಶೋಕ್ವರನ್ನು ಬಿಜೆಪಿ ಅಲ್ಲಿ ಕಣಕ್ಕಿಳಿಸಿದೆ. ಜೊತೆಗೆ ಪದ್ಮನಾಭ ನಗರದಲ್ಲೂ ಟಿಕೆಟ್ ನೀಡಿದೆ. ಕಳೆದ ರಾತ್ರಿ ಬಿಜೆಪಿ ಲಿಸ್ಟ್ ಅನೌನ್ಸ್ ಆಗುತ್ತಿದ್ದಂತೆ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಕನಕಪುರದಲ್ಲಿ ಡಿಕೆಶಿಗೆ ಠಕ್ಕರ್ ಕೊಡಲು ಬರುತ್ತಿರುವ ಆರ್.ಅಶೋಕ್ಗೆ ಪದ್ಮನಾಭನಗರದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಪದ್ಮನಾಭ ನಗರದಲ್ಲಿ ಆರ್.ಅಶೋಕ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಲಾಗುತ್ತಿದೆ.
ಇಂದು ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಪದ್ಮನಾಭನಗರದಲ್ಲಿ ಸಂಸದ ಡಿ.ಕೆ.ಸುರೇಶ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಪದ್ಮನಾಭನಗರದಲ್ಲಿ ನಮ್ಮ ಅಭ್ಯರ್ಥಿ ಯಾರೇ ಆದರೂ ಈ ಬಾರಿ ಆರ್.ಅಶೋಕ್ ಅವರು ಸೋಲುತ್ತಾರೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಚೆಸ್ ಆಡುತ್ತಿದ್ದಾರೆ. ನಮಗೂ ಚೆಸ್ ಆಡಲು ಬರುತ್ತೆ. ಆಡುತ್ತೇವೆ ಎಂದು ಡಿಕೆಶಿ ಇದೇ ವೇಳೆ ಹೇಳಿದ್ದಾರೆ.
ಇನ್ನು ಸಿಎಂ ಬೊಮ್ಮಾಯಿ ವಿರುದ್ಧವೂ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಚಿಂತನೆ ನಡೆಸಲಾಗುತ್ತಿದೆ. ವಿನಯ್ ಕುಲಕರ್ಣಿ ಸೂಕ್ತ ಅಭ್ಯರ್ಥಿಯಾಗಿದ್ದರು. ಆದ್ರೆ ಈಗಾಗಲೇ ಅವರಿಗೆ ಧಾರವಾಡದಿಂದ ಟಿಕೆಟ್ ನೀಡಲಾಗಿದೆ. ಹೀಗಾಗಿ ಶಿಗ್ಗಾಂವಿ ಅಭ್ಯರ್ಥಿ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.