ಕೋಲಾರದಿಂದ ಸಿದ್ದರಾಮಯ್ಯಗೆ ಟಿಕೆಟ್ ಸಿಗುತ್ತಾ..?; ತಡ ಮಾಡ್ತಿರೋದು ಯಾಕೆ..?
ಬೆಂಗಳೂರು; ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೊದಲ ಪಟ್ಟಿಯಲ್ಲೇ ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಆದ್ರೆ ಅವರು ಕೋಲಾರ ಕ್ಷೇತ್ರದಿಂದಲೂ ಸ್ಪರ್ಧೆ ಮಾಡ್ತೀನಿ ಅಂತಿದ್ದಾರೆ. ಆದ್ರೆ, ಹೈಕಮಾಂಡ್ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡೋದಕ್ಕೆ ಹಿಂದೇಟು ಹಾಕುತ್ತಿದ್ದಂತೆ ಕಾಣುತ್ತಿದೆ. ಹೀಗಾಗಿ ಎರಡನೇ ಪಟ್ಟಿ ಬಿಡುಗಡೆಯಾದರೂ ಅದರಲ್ಲಿ ಕೋಲಾರದ ಹೆಸರಿಲ್ಲ.
ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲುವ ಭೀತಿ ಇತ್ತು. ಈ ಕಾರಣದಿಂದಾಗಿ ಅವರಿಗೆ ಬದಾಮಿ ಕ್ಷೇತ್ರದಲ್ಲೂ ಸ್ಪರ್ಧೆಗೆ ಅವಕಾಶ ನೀಡಲಾಗಿತ್ತು. ಆದ್ರೆ ಈ ಬಾರಿ ವರುಣಾ ಕ್ಷೇತ್ರದಲ್ಲಿ ಆ ಭೀತಿ ಇಲ್ಲ. ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲೋದಕ್ಕೆ ಯಾವುದೇ ತೊಂದರೆ ಇಲ್ಲ. ಹೀಗಿರುವಾಗ ಎರಡನೇ ಕ್ಷೇತ್ರ ಯಾಕೆ ಎಂಬ ಪ್ರಶ್ನೆಯನ್ನು ಹೈಕಮಾಂಡ್ ನಾಯಕರು ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ನಾನು ಈಗಾಗಲೇ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಬಿಟ್ಟಿದ್ದಾರೆ. ಕೋಲಾರದ ಮುಖಂಡರು ಕೂಡಾ ಇದಕ್ಕೆ ಫಿಕ್ಸ್ ಆಗಿದ್ದಾರೆ. ನಾನು ಕೋಲಾರದಲ್ಲೂ ಸ್ಪರ್ಧೆ ಮಾಡುವುದರಿಂದ ಕೋಲಾರ ಭಾಗದಲ್ಲಿ ಕಾಂಗ್ರೆಸ್ ಮತ್ತಷ್ಟು ಬಲ ಬರಲಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರಂತೆ. ಒಂದು ವೇಳೆ ಎರಡೂ ಕ್ಷೇತ್ರದಲ್ಲಿ ಗೆದ್ದರೆ, ವರುಣಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿ, ಉಪಚುನಾವಣೆಯಲ್ಲಿ ಪುತ್ರ ಯತೀಂದ್ರರನ್ನು ಗೆಲ್ಲಿಸಿಕೊಂಡು ಬರುವ ತಂತ್ರ ಸಿದ್ದರಾಮಯ್ಯರದ್ದಂತೆ. ಆದ್ರೆ ಇದಕ್ಕೆ ಕೆಲ ವರಿಷ್ಠ ನಾಯಕರು ಒಪ್ಪುತ್ತಿಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಗೊಂದಲ ಮುಂದುವರೆದ ಕಾರಣದಿಂದಾಗಿ ಕೋಲಾರ ಕ್ಷೇತ್ರವನ್ನು ಇನ್ನೂ ಫೈನಲ್ ಮಾಡಿಲ್ಲ.