ಮಧುಮೇಹ ಇರುವವರಿಗೆ ಕಣ್ಣು ಕಾಣದಂತಾಗುವುದು ಏಕೆ..?; ಇದನ್ನು ತಪ್ಪಿಸೋದು ಹೇಗೆ..?
ಬದಲಾಗುತ್ತಿರುವ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ನಾನಾ ರೋಗಗಳು ವಕ್ಕರಿಸುತ್ತಿವೆ. ವಯಸ್ಸಿನ ಭೇದವಿಲ್ಲದೆ ಎಲ್ಲರೂ ಎಲ್ಲರೂ ಒಂದಿಲ್ಲೊಂದು ರೋಗಕ್ಕೆ ತುತ್ತಾಗುತ್ತಿದ್ದಾರೆ. ಅದರಲ್ಲೂ ಮಧುಮೇಹ ಕಾಯಿಲೆ ಈಗ ಸಾಮಾನ್ಯವಾಗಿಬಿಟ್ಟಿದೆ. ಮಧುಮೇಹ ಹೆಚ್ಚಾಗಿದ್ದರಿಂದ ಕೆಲವರು ದೃಷ್ಟಿ ಕಳೆದುಕೊಂಡವರು ಕೂಡಾ ಇದ್ದಾರೆ.
ಹಾಗಾದ್ರೆ ಸಕ್ಕರೆ ಅಂಶ ದೇಹದಲ್ಲಿ ಹೆಚ್ಚಾದರೆ ಏಕೆ ನಾವು ದೃಷ್ಟಿ ಕಳೆದುಕೊಳ್ಳುತ್ತೇವೆ..? ಈ ಸಮಸ್ಯೆಯನ್ನು ವೈದ್ಯಕೀಯ ಪರಿಭಾಷೆಯಲ್ಲಿ ಡಯಾಬಿಟಿಕ್ ರೆಟಿನೋಪತಿ ಅಂತಾರೆ. ಇದು ಮಧುಮೇಹದ ಪರಿಣಾಮವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಇದು ಕಣ್ಣಿನ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ. ರಕ್ತದಲ್ಲಿನ ಹೆಚ್ಚಿನ ಸಕ್ಕರೆ ಮಟ್ಟ ಸೂಕ್ಷ್ಮವಾದ ಅಂಗಾಂಶದಿಂದಾಗಿ ರೆಟಿನಾದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಹಾನಿಗೊಳಗಾದ ರಕ್ತನಾಳಗಳು ಕಾಲಾನಂತರದಲ್ಲಿ ದ್ರವ ಅಥವಾ ರಕ್ತ ಸೋರಿಕೆಗೆ ಕಾರಣವಾಗುತ್ತವೆ. ಇದು ಕಣ್ಣಿನ ರೆಟಿನಾದಲ್ಲಿ ಊತವನ್ನು ಉಂಟುಮಾಡುತ್ತದೆ.
ಹಾಗಾದ್ರೆ ನಮ್ಮ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು. ವೈದ್ಯರು ನೀಡೋ ಸಲಹೆಗಳೇನು..?
ಡಯಾಬಿಟಿಕ್ ರೆಟಿನೋಪತಿಯನ್ನು ಈ ರೀತಿ ತಡೆಯಬಹುದು;
ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು;
ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಆ ಮೂಲಕ ಡಯಾಬಿಟಿಕ್ ರೆಟಿನೋಪತಿಯನ್ನು ತಡೆಯಬಹುದು. ರಕ್ತದಲ್ಲಿನ ಅಧಿಕ ಸಕ್ಕರೆಯ ಮಟ್ಟ ರೆಟಿನಾದಲ್ಲಿನ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಆಗಾಗ ಪರೀಕ್ಷೆ ಮಾಡುವುದು ಹಾಗೂ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮಾಡಬೇಕು.
ಜೀವನಶೈಲಿಯಲ್ಲಿ ಬದಲಾವಣೆ
ಆರೋಗ್ಯಕರ ಆಹಾರವನ್ನು ಸೇವಿಸುವುದು, ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ಪರಿಣಾಮಕಾರಿ ತೂಕವನ್ನು ಕಾಪಾಡಿಕೊಳ್ಳುವುದು ಡಯಾಬಿಟಿಕ್ ರೆಟಿನೋಪತಿಯನ್ನು ತಡೆಯಲು ಸಹಾಯ ಮಾಡುತ್ತದೆ. ಈ ಜೀವನಶೈಲಿ ಬದಲಾವಣೆಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಯಮಿತ ಕಣ್ಣಿನ ತಪಾಸಣೆ
ನಿಯಮಿತವಾಗಿ ಕಣ್ಣಿನ ಪರೀಕ್ಷೆಗಳು ಮಾಡಿಸುವುದರಿಂದ ಡಯಾಬಿಟಿಕ್ ರೆಟಿನೋಪತಿ ಬರದಂತೆ ತಡೆಯಬಹುದು. ಕಣ್ಣಿನ ವೈದ್ಯರು ನಿಮ್ಮ ರೆಟಿನಾದ ಹಾನಿಯ ಚಿಹ್ನೆಗಳನ್ನು ಸಹ ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ ಚಿಕಿತ್ಸೆಯನ್ನು ನೀಡುತ್ತಾರೆ. ಆದ್ದರಿಂದ, ಮಧುಮೇಹ ರೋಗಿಗಳು ವರ್ಷಕ್ಕೊಮ್ಮೆಯಾದರೂ ಸಮಗ್ರ ಕಣ್ಣಿನ ಪರೀಕ್ಷೆಗೆ ಒಳಗಾಗಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
ಧೂಮಪಾನವನ್ನು ತ್ಯಜಿಸಬೇಕು
ಧೂಮಪಾನವು ನಿಮ್ಮ ಡಯಾಬಿಟಿಕ್ ರೆಟಿನೋಪತಿಯ ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ ಮಧುಮೇಹದಿಂದ ಆರೋಗ್ಯ ತೊಂದರೆಗಳಿಗೂ ಕಾರಣವಾಗುತ್ತದೆ. ಹಾಗಾಗಿ ಮಧುಮೇಹಿಗಳು ಧೂಮಪಾನದಿಂದ ದೂರವಿರಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.