NationalPolitics

ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ಆರಂಭ; ಫೈನಲ್‌ ಆಗುತ್ತಾ ಎರಡನೇ ಪಟ್ಟಿ..?

ನವದೆಹಲಿ; ಕಾಂಗ್ರೆಸ್‌ ನಾಯಕರು ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡನೇ ಪಟ್ಟಿ ಫೈನಲ್‌ ಮಾಡಲು ಕಸರತ್ತು ನಡೆಸುತ್ತಿದ್ದಾರೆ. ಈಗಾಗಲೇ ರಾಜ್ಯದಿಂದ ಒಂದು ಪಟ್ಟಿ ಕೇಂದ್ರ ನಾಯಕರಿಗೆ ತಲುಪಿದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್‌ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯುತ್ತಿದೆ. 

ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ದೆಹಲಿ ತಲುಪಿದ್ದಾರೆ. ಇಂದು ರಾಹುಲ್‌ ಗಾಂಧಿ, ರಣದೀಪ್‌ ಸುರ್ಜೇವಾಲಾ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಭೆಯಲ್ಲಿ ಎರಡನೇ ಪಟ್ಟಿ ಅಂತಿಮಗೊಳಿಸಲಾಗುತ್ತದೆ. ಈಗಾಗಲೇ 124 ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಿದೆ. ಉಳಿದ ನೂರು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆಯಾಗಬೇಕಿದೆ. ಈ ಸಂಬಂಧ ಇಂದು ಚರ್ಚೆ ನಡೆಯಲಿದ್ದು, ಇಂದೇ ಪಟ್ಟಿಗೆ ಅಂತಿಮ ಮುದ್ರೆ ಬೀಳಲಿದೆ.

ಸಿದ್ದರಾಮಯ್ಯ ಅವರಿಗೆ ಮೊದಲ ಪಟ್ಟಿಯಲ್ಲಿ ವರುಣಾ ಕ್ಷೇತ್ರದಲ್ಲಿ ಟಿಕೆಟ್‌ ನೀಡಲಾಗಿತ್ತು. ಇದರ ಜೊತೆಗೆ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರವನ್ನೂ ಕೇಳುತ್ತಿದ್ದಾರೆ. ಇನ್ನೊಂದೆಡೆ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್‌ ಅವರು ಕೊರಟಗೆರೆ ಜೊತೆಗೆ ಬೆಂಗಳೂರಿನ ಪುಲಿಕೇಶಿನಗರ ಕ್ಷೇತ್ರವನ್ನೂ ಕೇಳುತ್ತಿದ್ದಾರೆ. ಈ ಇಬ್ಬರು ನಾಯಕರಿಗೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಹೈಕಮಾಂಡ್‌ ಅವಕಾಶ ಮಾಡಿಕೊಡುತ್ತಾ ನೋಡಬೇಕು.

Share Post