ಮಾ.17ರ ಚುನಾವಣಾ ಸಮಿತಿ ಸಭೆಯಲ್ಲಿ ಅಭ್ಯರ್ಥಿಗಳ ಅಂತಿಮ ಆಯ್ಕೆ; ಡಿ.ಕೆ.ಶಿವಕುಮಾರ್
ಬೆಂಗಳೂರು; ಮಾರ್ಚ್ 16 ರಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಮಾರ್ಚ್ 17ರಂದು ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಂತಿಮ ತೀರ್ಮಾನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶೀಘ್ರದಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರುಗಳನ್ನು ಫೈನಲ್ ಮಾಡಲಾಗುವುದು ಎಂದು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೌಡಿ ಶೀಟರ್ ಗೆ ಕೈಮುಗಿದಿರುವ ಬಗ್ಗೆ ಪ್ರತಿಕ್ರಿಸಿದ ಡಿ.ಕೆ.ಶಿವಕುಮಾರ್, ‘ಅವರ ಪಕ್ಷ, ಅವರಿಗೆ ಯಾರು ಬೇಕೋ ಅವರನ್ನು ಸೇರಿಸಿಕೊಂಡಿದ್ದಾರೆ. ಅವರು ಸ್ಯಾಂಟ್ರೋ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ, ಫೈಟರ್ ರವಿ ಅವರನ್ನಾದರೂ ಸೇರಿಸಿಕೊಳ್ಳಲಿ, ಅತ್ಯಾಚಾರಿಗಳನ್ನಾದರೂ, ಲಂಚಕೋರರನ್ನಾದರೂ ಇಟ್ಟುಕೊಳ್ಳಲಿ. ಅದು ಅವರ ಪಕ್ಷದ ವಿಚಾರ. ಅದರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದರು.
ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು ತಮ್ಮನ್ನು ಭೇಟಿ ಮಾಡಿ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡುವುದು ಬೇಡ ಎಂಬ ಬೇಡಿಕೆ ಇಟ್ಟಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನಾವು ಅವರಿಗೆ ಟಿಕೆಟ್ ನೀಡುತ್ತಿದ್ದೇವೆ ಎಂದು ಯಾರು ಹೇಳಿದರು?. ಪಕ್ಷದ ಅನುಕೂಲಕ್ಕೆ ತಕ್ಕಂತೆ ಪಕ್ಷ ತೀರ್ಮಾನ ಮಾಡಲಿದೆ. ಯಾರ ಬೆದರಿಕೆಗೂ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ. ಪಕ್ಷ ಈ ವಿಚಾರವಾಗಿ ಯಾವ ತೀರ್ಮಾನ ಮಾಡಬೇಕೋ ಅದನ್ನು ಮಾಡಲಿದೆ’ ಎಂದರು.
ಮಂಡ್ಯವನ್ನು ರಾಷ್ಟ್ರದಲ್ಲಿ ಮಾದರಿ ಜಿಲ್ಲೆ ಮಾಡುವುದಾಗಿ ಪ್ರಧಾನಿ ಹೇಳಿದ್ದಾರಲ್ಲ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಮಂಡ್ಯದಲ್ಲಿ ಮೋದಿ ಅವರು ಯಾರ ಬಗ್ಗೆ ಮಾತನಾಡಿದ್ದಾರೆ, ಯಾರ ಬಗ್ಗೆ ಮಾತನಾಡಿಲ್ಲ ಎಂದು ನಾನು ಹೇಳಬೇಕಾಗಿಲ್ಲ, ಮಾಧ್ಯಮಗಳು ವರದಿ ಮಾಡಿವೆ. ಜನರಿಗೆ ಅದು ತಿಳಿದಿದೆ’ ಎಂದು ತಿಳಿಸಿದರು. ಕೆಪಿಟಿಸಿಎಲ್ ನೌಕರರು ವಿದ್ಯುತ್ ಕಡಿತ ಮಾಡಿ ಕೆಲಸಕ್ಕೆ ಗೈರಾಗಿ ವೇತನ ಪರಿಷ್ಕರಣೆಗೆ ಒತ್ತಾಯಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ನಂತರ ಪ್ರತಿಕ್ರಿಯೆ ನೀಡುತ್ತೇನೆ’ ಎಂದರು.