ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜು; ನಾಳೆ ಬೆಂಗಳೂರಿಗೆ ಕೇಂದ್ರ ಚುನಾವಣಾ ಆಯುಕ್ತ
ಬೆಂಗಳೂರು; ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಬೆಂಗಳೂರಿಗೆ ಬರುತ್ತಿದ್ದಾರೆ. ರಾಜ್ಯದಲ್ಲಿ ಚುನಾವಣಾ ಪೂರ್ವ ಸಿದ್ಧತೆ ಹೇಗೆ ನಡೆದಿದೆ ಎಂದು ವೀಕ್ಷಣೆ ಮಾಡೋದಕ್ಕಾಗಿ ಅವರು ಬೆಂಗಳೂರಿಗೆ ಬರುತ್ತಿದ್ದಾರೆ. ಮುಖ್ಯ ಚುನಾವಣಾ ಆಯುಕ್ತರ ಜೊತೆ ಚುನಾವಣಾ ಆಯುಕ್ತ ಚಂದ್ರ ಪಾಂಡೆ, ಅರುಣ್ ಗೋಯಲ್ ಕೂಡಾ ಆಗಮಿಸುತ್ತಿದ್ದಾರೆ.
ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಂತೆ ಕೇಂದ್ರ ಚುನಾವಣಾ ಆಯೋಗದ ಎಲ್ಲಾ ಅಧಿಕಾರಿಗಳು ರಾಜ್ಯ ಮುಖ್ಯ ಚುನಾವಣಾಧಿಕಾರಿ ಜೊತೆ ಮಾತುಕತೆ ನಡೆಸಲಿದ್ದಾರೆ. ಚುನಾವಣೆಗೆ ಬೇಕಾದ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಅನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಲಿದ್ದಾರೆ. ಚುನಾವಣೆಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಪಡೆಯಲಿದ್ದಾರೆ. ನಾಳೆ ಸಂಜೆ ತಾಜ್ ವೆಸ್ಟೆಂಡ್ನಲ್ಲಿ ‘ಪ್ರಜಾಪ್ರಭುತ್ವದ ಒಳಗೊಳ್ಳುವಿಕೆ ಮತ್ತು ಸಮಗ್ರತೆ’ ವಿಷಯ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಇದರಲ್ಲಿ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಪಾಲ್ಗೊಳ್ಳಲಿದ್ದು, ಹಲವು ಪ್ರಜಾಪ್ರಭುತ್ವ ದೇಶಗಳ ಚುನಾ ವಣಾ ಆಯುಕ್ತರ ಜೊತೆ ನೇರ ವಿಡಿಯೋ ಸಂವಾದ ನಡೆಸಲಿದ್ದಾರೆ.
ಮಾರ್ಚ್ 10 ರಂದು ರಾಜ್ಯದ ಜಿಲ್ಲಾ ಚುನಾವಣಾಧಿಕಾರಿಗಳ ಜತೆ ಪೂರ್ವಭಾವಿ ತಯಾರಿ ಸಭೆ ನಡೆಯಲಿದೆ. ಶುಕ್ರವಾರ ಸಂಜೆ ಐಎಸ್ಸಿ ಆವರಣದಲ್ಲಿರುವ ಟಾಟಾ ಸಭಾಂಗಣದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಅದರಲ್ಲಿ ರಾಜೀವ್ ಕುಮಾರ್ ಭಾಗವಹಿಸುತ್ತಾರೆ. ಮಾರ್ಚ್ 11ರಂದು ಕೂಡಾ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.