ಬಿಜೆಪಿ ಶಾಸಕರೂ ಕಾಂಗ್ರೆಸ್ಗೆ ಬರ್ತಾರೆ; ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಬೆಂಗಳೂರು; ಮುಂದಿನ ದಿನಗಳಲ್ಲಿ ಬಿಜೆಪಿಯ ಹಾಲಿ ಶಾಸಕರು ಕೂಡಾ ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದಾರೆ. ಕಾಂಗ್ರೆಸ್ ಸೇರುವವರ ದೊಡ್ಡ ಪಟ್ಟಿಯೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಇಂದು ಮಾಜಿ ಶಾಸಕರಾದ ಮನೋಹರ್ ಐನಾಪುರ, ಜಿ.ಎನ್.ನಂಜುಂಡಸ್ವಾಮಿ ಹಾಗೂ ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅವರನ್ನು ಕಾಂಗ್ರೆಸ್ಗೆ ಬರಮಾಡಿಕೊಳ್ಳಲಾಯ್ತು. ಅನಂತರ ಮಾತನಾಡಿದ ಡಿ.ಕೆ.ಶಿವಕುಮಾರ್, ನಾವು ಯಾವಾಗ ಬೇಕಾದರೂ ಚುನಾವಣೆಗೆ ಹೋಗಲು ಸಿದ್ಧ ಎಂದು ಹೇಳಿದರು.
ಈಗ ಇಬ್ಬರು ಮಾಜಿ ಶಾಸಕರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಹಾಲಿ ಶಾಸಕರೇ ಬರಲಿದ್ದಾರೆ. ಈ ಮೊದಲು ಬಿಜೆಪಿಯವರು ಬೇಗ ಚುನಾವಣೆಗೆ ಹೋಗಬೇಕೆಂದು ಅಧಿಕಾರಿಗಳನ್ನು ಕರೆಸಿ ಚರ್ಚೆ ಮಾಡಿದ್ದರು. ಆದ್ರೆ ಬಿಜೆಪಿಯವರಿಗೆ ನಿತ್ಯ ಜನರೇ ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಹೀಗಾಗಿ ಚುನಾವಣಾ ದಿನಾಂಕ ಘೋಷಣೆ ದಿನೇ ದಿನೇ ಮುಂದಕ್ಕೆ ಹೋಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ರು.
ನಾವು ಜನರ ಮುಂದೆ ಮಾಡಿರುವ ಉಚಿತ ಘೋಷಣೆಗಳನ್ನು ಬೋಗಸ್ ಎಂದು ಹೇಳಲಾಗುತ್ತಿದೆ. ಉಚಿತ ವಿದ್ಯುತ್ ನೀಡುವ ಬಗ್ಗೆ ಚರ್ಚೆ ಮಾಡಲು ನಾವು ತಯಾರಿದ್ದೇವೆ. ಬನ್ನಿ ಚರ್ಚೆಗೆ ಯಾವುದೇ ವೇದಿಕೆಯಾದರೂ ಸರಿ ಎಂದು ಡಿಕೆಶಿ ಸವಾಲ್ ಹಾಕಿದರು. ಉಚಿತ ವಿದ್ಯುತ್ ಆಗಲೀ, ನಾವು ನೀಡುತ್ತಿರುವ ಯಾವುದೇ ಭರವಸೆಗಳಾಲೀ ಎಲ್ಲವನ್ನೂ ನಾವು ಈಡೇರಿಸುತ್ತೇವೆ. ಆ ಶಪಥ ಮಾಡಿದ್ದೇವೆ. ಅದನ್ನು ಮಾಡಲಿಲ್ಲ ಎಂದರೆ ನಾವು ಮುಂದೆ ಯಾವತ್ತೂ ರಾಜ್ಯದ ಜನರ ಮುಂದೆ ಹೋಗಿ ರಾಜಕಾರಣ ಮಾಡೋದಿಲ್ಲ ಎಂದು ಡಿಕೆಶಿ ಇದೇ ವೇಳೆ ಹೇಳಿದ್ರು.