ಉಪೇಂದ್ರರ ಪ್ರಜಾಕೀಯ ಪಾರ್ಟಿ ಈ ಬಾರಿ ಅಖಾಡಕ್ಕಿಳಿಯುತ್ತಾ..?
ಬೆಂಗಳೂರು; ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮೂರೂ ಪಕ್ಷಗಳೂ ಈಗಾಗಲೇ ಪ್ರಚಾರದ ಭರಾಟೆ ಶುರು ಮಾಡಿವೆ. ಇದರ ನಡುವೆ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಕೂಡಾ ಸದ್ದಿಲ್ಲದೆ ಚುನಾವಣಾ ಅಖಾಡಕ್ಕೆ ಸಿದ್ಧವಾಗುತ್ತಿದೆ. ಈಗಾಗಲೇ ಚುನಾವಣಾ ಆಯೋಗದಿಂದ ಉತ್ತಮ ಪ್ರಜಾಕೀಯ ಪಕ್ಷ ಕಾಮನ್ ಚಿಹ್ನೆ ಸಿಕ್ಕಿದೆ. ಆಟೋ ಚಿಹ್ನೆಯಡಿ ಪ್ರಜಾಕೀಯ ಪಕ್ಷದ ಹುರಿಯಾಳುಗಳು ಕಣಕ್ಕಿಳಿಯಲಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಪ್ರಜಾಕೀಯ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದ್ರೆ ಯಾರೂ ಗೆದ್ದಿರಲಿಲ್ಲ. ಇದೀಗ ಮತ್ತೆ ಉಪೇಂದ್ರ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದಾರೆ. ಉಪೇಂದ್ರ ಅವರು ವಿಭಿನ್ನವಾಗಿ ಯೋಚನೆ ಮಾಡುತ್ತಾರೆ. ರಾಜಕೀಯದಲ್ಲೂ ಕೂಡಾ ಅದೇ ರೀತಿಯಾಗಿ ವಿಭಿನ್ನವಾಗಿ ಯೋಚಿಸಿ ಪಕ್ಷ ಕಟ್ಟಿದ್ದಾರೆ. ಅವರ ಪ್ರಕಾರ ಇದು ರಾಜಕೀಯವಲ್ಲ, ಪ್ರಜಾಕೀಯವಂತೆ.
ಪ್ರಜಾಕೀಯ ಅಬ್ಬರದ ಪ್ರಚಾರಗಳನ್ನು ನಡೆಸೋದಿಲ್ಲ. ಮತದಾರರ ಮನವೊಲಿಸಲು ಯಾವುದೇ ಆಮಿಷಗಳನ್ನು ಒಡ್ಡೋದಿಲ್ಲ. ಇಲ್ಲಿ ನಾಯಕರು ಯಾರೂ ಇರುವುದಿಲ್ಲ. ಇವರ ಪ್ರಕಾರ ಜನರೇ ನಾಯಕರು. ಜನರನ್ನು ಪ್ರಜಾಕೀಯದ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಅವರು ಪ್ರಜೆಗಳ ಸೇವಕರಂತೆ ಕೆಲಸ ಮಾಡುತ್ತಾರಂತೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಉಪೇಂದ್ರ ಅವರು ಪ್ರಜಾಕೀಯ ಪಾರ್ಟಿ ಕಟ್ಟಿದ್ದಾರೆ.
ಈ ಪಾರ್ಟಿಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳೋದಕ್ಕೆ ಹಣಬಲ ಬೇಕಿಲ್ಲ. ಬದಲಾಗಿ, ಅವರಿಗೆ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಅರಿವಿರಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ಗೊತ್ತಿರಬೇಕು. ಅವುಗಳನ್ನು ನಿವಾರಿಸುವ ವಿಧಾನದ ಬಗ್ಗೆ ತಿಳಿದಿರಬೇಕು. ಇದನ್ನು ಉಪೇಂದ್ರ ಅವರಿಗೆ ಮನವರಿಕೆ ಮಾಡಿಕೊಟ್ಟರೆ ಅವರಿಗೆ ಟಿಕೆಟ್ ಸಿಗುತ್ತದೆ. ಇದಕ್ಕಾಗಿ ವೆಬ್ ಸೈಟ್ ಕೂಡಾ ಇದ್ದು, ಪ್ರಾಜಾಕೀಯ ಪಾರ್ಟಿ ವೆಬ್ಸೈಟ್ನಲ್ಲಿರುವ ಅರ್ಜಿಯನ್ನು ತುಂಬಿದರೆ, ಅವರನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಸಂದರ್ಶನದಲ್ಲಿ ಪ್ರಜಾಸೇವೆಗೆ ಬರುತ್ತಿರುವ ಉದ್ದೇಶವನ್ನು ಸರಿಯಾಗಿ ಹೇಳಿದರೆ ಅವರಿಗೆರ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ.