ಚೀಲ ಬದಲಿಸಿ ರಿಯಾಯಿತಿ ಯೂರಿಯಾ ಮಾರಾಟಕ್ಕೆ ಯತ್ನ
ಮೈಸೂರು; ರೈತರಿಗೆ ರಿಯಾಯಿತಿ ದರದಲ್ಲಿ ನೀಡಲಾಗುವ ಯೂರಿಯಾವನ್ನ ಉತ್ತಮ ಗುಣಮಟ್ಟದ ಬ್ರಾಂಡ್ ಚೀಲಕ್ಕೆ ಬದಲಿಸಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ವ್ಯಕ್ತಿಗಳನ್ನು ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಉತ್ತಮ ಗುಣಮಟ್ಟದ ಚೀಲದಲ್ಲಿ ತುಂಬಲಾದ 290 ಮೂಟೆ ರಿಯಾಯಿತಿ ಯೂರಿಯಾ ವಶಪಡಿಸಿಕೊಳ್ಳಲಾಗಿದೆ. ಯೂರಿಯಾ ಸಾಗಣಿಕೆ ಬಳಸಿದ ಲಾರಿ ಸಹ ವಶಪಡಿಸಿಕೊಳ್ಳಲಾಗಿದೆ.ಡ್ರೈವರ್ ಸೇರಿದಂತೆ ಐವರನ್ನ ಬಂಧಿಸಲಾಗಿದೆ.ನಿಖಿಲ್,ಮಹಮದ್ ಬಷೀರ್,ಜಸೀರ್,ರಜೀಬ್ ಹಾಗೂ ಸಚಿನ್ ಬಂಧಿತರ ಆರೋಪಿಗಳು ಎಂದು ತಿಳಿದುಬಂದಿದೆ.
ಪಿರಿಯಾಪಟ್ಟಣ ತಾಲೂಕು ತೆಲಗನಕುಪ್ಪೆ ಗ್ರಾಮದ ರಾಜಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವ ಯೂರಿಯಾವನ್ನ ಸಂಗ್ರಹಿಸಿ TECHNICAL GRADE UREA ಎಂಬ ಬ್ರಾಂಡ್ ನಮೂದಿಸಿರುವ ಚೀಲಗಳಿಗೆ ಬದಲಾಯಿಸಿ ಕೇರಳಾ ರಾಜ್ಯಕ್ಕೆ ಸಾಗಿಸಲು ಯತ್ನಿಸುತ್ತಿದ್ದರು ಎನ್ನಲಾಗಿದೆ.