ವಿಕೃತಕಾಮಿ ಉಮೇಶ್ ರೆಡ್ಡಿಗೆ ಮರಣದಂಡನೆ ಕ್ಯಾನ್ಸಲ್; ಸುಪ್ರೀಂ ತೀರ್ಪು
ನವದೆಹಲಿ; ತೊಂಬತ್ತರ ದಶಕದಲ್ಲಿ ರಾಜ್ಯದ ಜನರ ನಿದ್ದೆಗೆಡಿಸಿದ್ದ ವಿಕೃತ ಕಾಮಿ ಉಮೇಶ್ ರೆಡ್ಡಿಗೆ ವಿಧಿಸಲಾಗಿದ್ದ ಮರಣ ದಂಡನೆ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಾಡು ಮಾಡಿ ಆದೇಶ ಹೊರಡಿಸಿದೆ.
ಸಿಜೆಐ ಉದಯ್ ಲಲಿತ್ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಉಮೇಶ್ ರೆಡ್ಡಿಯನ್ನು ಹತ್ತು ವರ್ಷಗಳ ಕಾಲ ಕಾನೂನು ಉಲ್ಲಂಘಿಸಿ ಹತ್ತು ವರ್ಷಗಳ ಕಾಲ ಏಕಾಂಗಿಯಾಗಿ ಬೆಳಗಾವಿ ಜೈಲಿನಲ್ಲಿಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಇದರಿಂದಾಗಿ ಅಪರಾಧಿ ಮೇಲೆ ದುಷ್ಪರಿಣಾಮ ಬೀರಿರುವುದರಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಉಮೇಶ್ ರೆಡ್ಡಿ ವಿಕೃತ ಕಾಮಿ. ಒಂಟಿ ಮಹಿಳೆಯರು ಸಿಕ್ಕರೆ ಅವರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡುತ್ತಿದ್ದ. ಅಲ್ಲದೆ ಮಹಿಳೆಯರ ಒಳಉಡುಪುಗಳನ್ನು ಧರಿಸಿ ವಿಕೃತ ಆನಂದಪಡುತ್ತಿದ್ದ. ಹೀಗಾಗಿ ಈತನ ಹಾವಳಿಯಿಂದ ಕರ್ನಾಟಕದ ಜನ ಬೆಚ್ಚಿಬಿದ್ದಿದ್ದರು.
ಉಮೇಶ್ ರೆಡ್ಡಿ ಸೈನಿಕನಾಗಿದ್ದ, ಅನಂತರ ಪೊಲೀಸ್ ಇಲಾಖೆಯಲ್ಲೂ ಕೆಲಸ ಮಾಡಿದ್ದ. ಆದ್ರೆ ಈತ ಮಾನಸಿಕವಾಗಿ ವಿಕೃತನಾಗಿದ್ದ. ಹೀಗಾಗಿ ಉಮೇಶ್ ರೆಡ್ಡಿ, ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ಮಾಡುತ್ತಿದ್ದ. ಸುಮಾರು 18 ಕೊಲೆ, 20ಕ್ಕೂ ಹೆಚ್ಚು ಅತ್ಯಾಚಾರ ಆರೋಪ ಈತನ ಮೇಲಿದೆ. ಒಂಬತ್ತು ಪ್ರಕರಣಗಳಲ್ಲಿ ಉಮೇಶ್‌ರೆಡ್ಡಿಗೆ ಶಿಕ್ಷೆಯಾಗಿದೆ. ಕರ್ನಾಟಕವಲ್ಲದೆ ಗುಜರಾತ್, ಮಹಾರಾಷ್ಟ್ರದಲ್ಲೂ ಉಮೇಶ್ ರೆಡ್ಡಿ ಇಂತಹ ಕೃತ್ಯಗಳನ್ನು ಎಸಗಿದ್ದಾನೆ.
ಚಿತ್ರದುರ್ಗ ಮೂಲದವನಾದ ಉಮೇಶ್ ರೆಡ್ಡಿ, ಸಿಆರ್‌ಪಿಎಫ್ ಯೋಧನಾಗಿ ಕೆಲಕಾಲ ಕೆಲಸ ಮಾಡಿದ್ದ. ಜಮ್ಮು-ಕಾಶ್ಮೀರದಲ್ಲಿ ಕೆಲಸ ಮಾಡುವಾಗ ಕಮಾಂಡರ್ ಮನೆಯಲ್ಲಿ ಅವರ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಹೀಗಾಗಿ ಉಮೇಶ್‌ರೆಡ್ಡಿಯನ್ನು ಸೇನೆಯಿಂದ ವಜಾ ಮಾಡಲಾಗಿತ್ತು. ನಂತರ ಜಿಲ್ಲಾ ಸಶಸ್ತ್ರಪಡೆಯಲ್ಲಿ ಸೇರಿದ್ದ. ಪುರುಷರು ಮನೆಯಲ್ಲಿ ಇಲ್ಲದ್ದನ್ನು ಗಮನಿಸುತ್ತಿದ್ದ ಉಮೇಶ್ ರೆಡ್ಡಿ, ಆ ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಮಹಿಳೆಗೆ ಚಾಕು ತೋರಿಸಿ ಬೆದರಿಸುತ್ತಿದ್ದ. ಅನಂತರ ಅತ್ಯಾಚಾರ ಎಸಗಿ ಕೊಲೆ ಮಾಡಿ ಚಿನ್ನಾಭರಣ ದೋಚುತ್ತಿದ್ದ. ಜೊತೆಗೆ ಮಹಿಳೆಯ ಒಳುಡುಪುಗಳನ್ನು ಧರಿಸಿಕೊಂಡು ಪರಾರಿಯಾಗುತ್ತಿದ್ದ.