BengaluruHistory

ಕಾರ್ಖಾನೆಗಳೆಲ್ಲಾ ಕಲ್ಯಾಣ ಮಂಟಪಗಳಾದವು..!

ಜಯಚಾಮರಾಜೇಂದ್ರ ಒಡೆಯರ್‌ ಸ್ಥಾಪಿಸಿದ ರಾಜಾಜಿನಗರ ಇಷ್ಟು ದೊಡ್ಡದಾಗಿ ಬೆಳೆಯಲು ಕಾರಣ, ಅಲ್ಲಿನ ಕೈಗಾರಿಕಾ ಪ್ರದೇಶ. ಆದರೆ ಕೈಗಾರಿಕಾ ಪ್ರದೇಶ ಈಗ ಕೊಂಚ ಕೊಂಚವೇ ಮಾಯವಾಗುತ್ತಿದೆ. ಕೈಗಾರಿಕೆಗಳು ಇದ್ದ ಜಾಗವನ್ನು ಈಗ ಮದುವೆ ಮಂಟಪಗಳು ಆವರಿಸಿಕೊಂಡಿವೆ.


ಹೌದು, ಬಸವೇಶ್ವರನಗರ ಸರ್ಕಲ್‌ನಿಂದ ಮಾಗಡಿ ರಸ್ತೆ ಟೋಲ್‌ ಗೇಟ್‌ಗೆ ಸಾಗುವಾಗ ಸರ್ವೀಸ್‌ ರಸ್ತೆಯ ಪಕ್ಕದಲ್ಲಿ ಸಾಲು ಸಾಲು ಕಲ್ಯಾಣ ಮಂಟಪಗಳು ಕಾಣಸಿಗುತ್ತವೆ. ಎರಡು ದಶಕಗಳ ಹಿಂದೆ ಹೋದರೆ ಇದೇ ಸ್ಥಳದಲ್ಲಿ ಹಲವಾರು ಮೆಟಲ್‌ ತಯಾರಿಕಾ ಉದ್ಯಮಗಳಿದ್ದವು. ಜೊತೆಗೆ ಸಣ್ಣ ಸಣ್ಣ ಕೈಗಾರಿಕೆಗಳೂ ನಡೆಯುತ್ತಿದ್ದವು. ಆದರೆ ರಾಜಾಜಿನಗರ ಬೆಂಗಳೂರು ನಗರದ ಕೇಂದ್ರ ಪ್ರದೇಶವಾಗುತ್ತಿದ್ದಂತೆ ಕಾರ್ಖಾನೆಗಳು ಮಾಯವಾಗತೊಡಗಿವೆ. ಎರಡು ದಶಕಗಳಿಂದ ಅಲ್ಲಿ ಕಾರ್ಖಾನೆಗಳ ಸದ್ದಿಗಿಂತ ಹೆಚ್ಚಾಗಿ ಮದುವೆಯ ಗಟ್ಟಿಮೇಳದ ಸದ್ದು ಜೋರಾಗಿ ಕೇಳಿಸುತ್ತಿದೆ.

ಮಾಲಿನ್ಯ, ಸಾಗಾಣೆ ಸಮಸ್ಯೆ..!
ರಾಜಾಜಿನಗರ ಸ್ಥಾಪನೆಯಾದಾಗ ಈ ಬಡಾವಣೆ ಬೆಂಗಳೂರು ನಗರದ ಹೊರವಲಯದಲ್ಲಿತ್ತು. ಆದರೆ, ನಗರ ಬೆಳೆಯುತ್ತಿದ್ದಂತೆ ರಾಜಾಜಿನಗರ ಬೆಂಗಳೂರು ನಗರದ ಕೇಂದ್ರ ಸ್ಥಾನಕ್ಕೆ ಬಂದಿದೆ. ಹೀಗಾಗಿ ನಗರ ಮಧ್ಯ ಭಾಗದಲ್ಲಿ ಕಾರ್ಖಾನೆಗಳು ನಡೆಸುವುದು ಕಷ್ಟಕರ. ಕಚ್ಚಾವಸ್ತುಗಳನ್ನು ತರುವುದು, ತಯಾರಿಯಾದ ಉತ್ಪನ್ನಗಳನ್ನು ಸಾಗಿಸುವುದು ಕಷ್ಟವಾಗುತ್ತಿದೆ. ಜೊತೆಗೆ ಕಾರ್ಖಾನೆಗಳಿಂದ ಹೊರಬರುವ ಹೊಗೆಯಿಂದ ನಗರದ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಹೀಗಾಗಿ, ಕಾರ್ಖಾನೆಗಳು ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದವು. ಇದ್ರಿಂದಾಗಿ ಕಾರ್ಖಾನೆಗಳು ತುಮಕೂರು ರಸ್ತೆಯ ಡಾಬಸ್‌ ಪೇಟೆ ಕಡೆಗೆ ಶಿಫ್ಟ್‌ ಆಗಿವೆ. ಈಗಲೂ ಆಗುತ್ತಲಿವೆ. ಕಾರ್ಖಾನೆಗಳು ಇದ್ದ ಜಾಗದಲ್ಲಿ ಕಲ್ಯಾಣ ಮಂಟಪಗಳು ತಲೆ ಎತ್ತುತ್ತಿವೆ.

ಒಂದೇ ಸ್ಥಳದಲ್ಲಿ ೬೦ಕ್ಕೂ ಹೆಚ್ಚು ಕಲ್ಯಾಣ ಮಂಟಪಗಳು..!
ಯಾವಾಗ ಕಾರ್ಖಾನೆಗಳು ಮುಚ್ಚಿದವೋ ಅಥವಾ ಸ್ಥಳಾಂತರಗೊಂಡವೋ ಅಲ್ಲಿ ಕಲ್ಯಾಣ ಮಂಟಪಗಳು ತಲೆ ಎತ್ತುತ್ತಾ ಬಂದವು. ಕಾರ್ಖಾನೆಗಳ ಶೆಡ್‌ಗಳೇ ನವೀಕರಣಗೊಂಡು ಕಲ್ಯಾಣ ಮಂಪಟಗಳಾದವು. ಕೆಲವನ್ನು ಹೊಸದಾಗಿ ನಿರ್ಮಿಸಲಾಯಿತು. ೧೫ ವರ್ಷಗಳ ಹಿಂದೆ ಇಲ್ಲಿ ನಾಲ್ಕೈದು ಕಲ್ಯಾಣ ಮಂಟಪಗಳು ಮಾತ್ರ ಇದ್ದವು. ಆದರೀಗ ಅವುಗಳ ಸಂಖ್ಯೆ ೬೦ಕ್ಕೂ ಹೆಚ್ಚಾಗಿದೆ.
ಕಾರ್ಡ್ ರೋಡ್‌ನಲ್ಲಿರುವ ಪ್ರಮುಖ ಕಲ್ಯಾಣ ಮಂಟಪಗಳಲ್ಲಿ ಶಿವಪ್ರಭಾ ಕಲ್ಯಾಣ ಮಂಟಪವೂ ಒಂದು. ಇಲ್ಲಿ ಮೊದಲು ಉಕ್ಕಿನ ಫ್ರೇಮ್‌ಗಳನ್ನು ತಯಾರಿಸುವ ಕಾರ್ಖಾನೆ ಇತ್ತು. ಅದನ್ನು ಮಾರ್ಪಡಿಸಿ ಕಲ್ಯಾಣ ಮಂಟಪ ಮಾಡಲಾಯಿತು. ಹಾಗೆ, ಹತ್ತಾರು ಕಾರ್ಖಾನೆಗಳು ಮಾರ್ಪಾಡಾಗಿ ಕಲ್ಯಾಣ ಮಂಟಪಗಳಾಗಿವೆ.

೬೦ ಸಾವಿರದಿಂದ ೫ ಲಕ್ಷ ರೂ.ಬಾಡಿಗೆ..!
ಕಲ್ಯಾಣ ಮಂಟಪಗಳು ಹೆಚ್ಚಾಗಿದ್ದರಿಂದ ಮಾಲೀಕರಿಗೆ ನಷ್ಟ ಕೂಡಾ ಆಗುತ್ತಿದೆ. ಆದರೂ, ವರ್ಷದಿಂದ ವರ್ಷಕ್ಕೆ ಇಲ್ಲಿ ಕಲ್ಯಾಣ ಮಂಟಪಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ಮಾಗಡಿ ರಸ್ತೆಯಲ್ಲೂ ಕಲ್ಯಾಣ ಮಂಟಪಗಳು ಹೆಚ್ಚಾಗುತ್ತಿರುವುದರಿಂದ ಈ ಬ್ಯುಸಿನೆಸ್‌ ಕೂಡಾ ನಷ್ಟದ ಹಾದಿಯಲ್ಲಿ ಸಾಗುತ್ತಿದೆ. ಹೀಗಿದ್ದರೂ ಒಬ್ಬೊಬ್ಬರು ಮೂರು ನಾಲ್ಕು ಕಲ್ಯಾಣ ಮಂಟಪಗಳನ್ನು ನಡೆಸುತ್ತಿರುವುದನ್ನು ಇಲ್ಲಿ ಕಾಣಬಹುದು.
ಅಂದಹಾಗೆ, ಇಲ್ಲಿ ೬೦ ಸಾವಿರ ರೂಪಾಯಿಂದ ೫ ಲಕ್ಷ ರೂಪಾಯಿ ಬಾಡಿಗೆ ಇರುವ ಕಲ್ಯಾಣ ಮಂಟಪಗಳೂ ಇಲ್ಲಿವೆ.

ಬನ್ನೇರುಘಟ್ಟ ರಸ್ತೆಯಿಂದ ರಾಜಾಜಿನಗರಕ್ಕೆ..!
ಮೊದಲು ಬೆಂಗಳೂರಿನಲ್ಲಿ ಮದುವೆ ಅಂದರೆ ಬನ್ನೇರುಘಟ್ಟ ರಸ್ತೆ ಎನ್ನುತ್ತಿದ್ದರು. ಬೆಂಗಳೂರಿನ ಪೈಕಿ ಬನ್ನೇರುಘಟ್ಟ ರಸ್ತೆಯಲ್ಲಿ ಅತಿ ಹೆಚ್ಚು ಹಾಗೂ ಸುಸಜ್ಜಿತ ಕಲ್ಯಾಣ ಮಂಟಪಗಳು ಇದ್ದವು. ಈಗಲೂ ಕೂಡಾ ಬನ್ನೇರುಘಟ್ಟ ರಸ್ತೆಯಲ್ಲಿ ಹಲವಾರು ಕಲ್ಯಾಣ ಮಂಟಪಗಳಿವೆ. ಆದರೆ ನಗರದ ಮಧ್ಯ ಭಾಗದಲ್ಲೇ ಇರುವ ರಾಜಾಜಿನಗರದಲ್ಲಿ ಹಲವಾರು ಕಲ್ಯಾಣ ಮಂಟಪಗಳು ತಲೆ ಎತ್ತಿದ್ದರಿಂದ ಇಲ್ಲಿ ಬೇಡಿಕೆ ಹೆಚ್ಚಾಗುತ್ತಾ ಹೋಯಿತು.

ಕೊರೋನಾ ಕಾರಣದಿಂದ ಭಾರಿ ನಷ್ಟ..!
೨೦೨೦ರ ಶುರುವಿನಲ್ಲಿ ಕೊರೋನಾ ವಕ್ಕರಿಸಿತ್ತು. ಈ ಮಹಾಮಾರಿ ಪ್ರಪಂಚದ ಅರ್ಥ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ. ಅದರಂತೆ ಬೆಂಗಳೂರು ನಗರವನ್ನೂ ಕೊರೋನಾ ಸಾಕಷ್ಟು ಕಾಡಿದೆ. ಅದರಲ್ಲೂ ಕಲುಆಣ ಮಂಟಪಗಳ ಮಾಲೀಕರು ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕೊರೋನಾ ಸಮಯದಲ್ಲಿ ಕಲ್ಯಾಣ ಮಂಟಪಗಳಿಗೆ ಬೀಗ ಹಾಕಲಾಗಿತ್ತು. ಅದಾದ ನಂತರ ಜನರ ಬಳಿ ಹಣವೂ ಇಲ್ಲದಂತಾಯಿತು. ಇದ್ರಿಂದಾಗಿ ಬಹುತೇಕರು ಸರಳ ವಿವಾಹಗಳಿಗೆ ಮೊರೆಹೋಗುತ್ತಿದ್ದಾರೆ. ಹೀಗಾಗಿ, ರಾಜಾಜಿನಗರದಲ್ಲಿರುವ ಕಲ್ಯಾಣ ಮಂಟಪಗಳು ಸೇರಿ ನಗರದಲ್ಲಿರುವ ಎಲ್ಲಾ ಕಲ್ಯಾಣ ಮಂಟಪಗಳ ಮಾಲೀಕರೂ ನಷ್ಟಕ್ಕೀಡಾಗಿದ್ದಾರೆ. ಕೆಲವರು ನಿರ್ವಹಣೆ ಮಾಡಲಾಗದೇ ಕಲ್ಯಾಣ ಮಂಟಪಗಳನ್ನು ಮುಚ್ಚುವ ಯೋಚನೆಯಲ್ಲೂ ಇದ್ದಾರೆ.

Share Post