ವಿಜಯಪುರದಲ್ಲಿ ಮತ್ತೆ ಕಂಪಿಸಿದ ಭೂಮಿ; ಜನರಲ್ಲಿ ಹೆಚ್ಚಿದ ಆತಂಕ
ವಿಜಯಪುರ; ವಿಜಯಪುರ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಆಗಾಗ ಭೂಮಿ ಕಂಪಿಸುವ ಅನುಭವ ಆಗುತ್ತಲೇ ಇದೆ. ಕಳೆದ ರಾತ್ರಿ ಕೂಡಾ ವಿಜಯಪುರದ ಕೆಲವೆಡೆ ಭೂಮಿ ಕಂಪಿಸಿದ್ದು, ಜನ ಬೆಚ್ಚಿಬಿದ್ದಿದ್ದಾರೆ. ಇಂದು ಬೆಳಗಿನಜಾವ ಕೂಡಾ ಭೂಮಿ ನಡುಗಿತು ಎಂದು ಕೆಲವರು ಹೇಳಿದ್ದಾರೆ.
ಕಳೆದ ರಾತ್ರಿ 11.40ರ ಸುಮಾರಿಗೆ ವಿಜಯಪುರ ನಗರದ ಕೆಲವೆಡೆ ಭೂಮಿ ಕಂಪಿಸಿದೆ. ಇದರಿಂದಾಗಿ ನಗರದ ಜನರು ನಿದ್ದೆಗೆಟ್ಟಿದ್ದಾರೆ. ಹೀಗಿರುವಾಗಲೇ ಇಂದು ಬೆಳಗ್ಗೆ 6.30ರ ಸುಮಾರಿಗೆ ಮತ್ತೆ ಭೂಮಿ ಕಂಪಿಸಿದೆ. ವಿಜಯಪುರದ ರೈಲ್ವೆ ಸ್ಟೇಷನ್ ಏರಿಯಾ, ರಂಭಾಪುರ ಬಡಾವಣೆ, ಬಸವೇಶ್ವರ ನಗರ, ಗೋಳಗುಮ್ಮಟ ಏರಿಯಾ ಸೇರಿ ಹಲವೆಡೆ ಭೂ ಕಂಪನವಾಗಿದೆ. ಕೆಲ ಸೆಕೆಂಡುಗಳ ಕಾಲ ಸಣ್ಣದಾಗಿ ಭೂಮಿ ನಡುಗಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ಬಗ್ಗೆ ಭೂಮಾಪನ ಕೇಂದ್ರದಿಂದ ಯಾವುದೇ ಮಾಹಿತಿ ರವಾನೆಯಾಗಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕಿಳಿದಿರುವುದರಿಂದ ಈ ರೀತಿಯ ಕಂಪನಗಳು ಆಗುತ್ತಿವೆ ಎಂದು ತಜ್ಞರು ಹೇಳುತ್ತಿದ್ದಾರೆ.