ಶುಶೃತಿ ಬ್ಯಾಂಕ್ ಅಕ್ರಮ; 14 ಕಡೆ ಸಿಸಿಬಿ ದಾಳಿ
ಬೆಂಗಳೂರು; ಬೆಂಗಳೂರಿನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ಗ್ರಾಹಕರಿಗೆ ಹೂಡಿಕೆ ಹಣ ಹಿಂದಿರುಗಿಸುತ್ತಿಲ್ಲವೆಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ 14 ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಬ್ಯಾಂಕ್ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ವಿಲ್ಸನ್ ಗಾರ್ಡನ್ನ ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ವಿರುದ್ಧ ಅಧಿಕ ಬಡ್ಡಿ ಆಮಿಷವೊಡ್ಡಿ ಹೂಡಿಕೆ ಮಾಡಿಸಿಕೊಂಡು ನಂತರ ಹಿಂತಿರುಗಿಸದೇ ವಂಚಿಸಿರುವ ಬಗ್ಗೆ ಹಲವು ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಇಂದು ಬೆಳಗ್ಗೆ ಸಿಸಿಬಿ ಪೊಲೀಸರು ಶುಶೃತಿ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರು, ಬ್ಯಾಂಕ್ನ ಕೇಂದ್ರ ಕಚೇರಿ ಹಾಗೂ ವಿವಿಧ ಬ್ರಾಂಚ್ಗಳ ಮೇಲೆ ದಾಳಿ ನಡೆಸಿದ್ದಾರೆ.
ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಚಾಲ ಸೇರಿದಂತೆ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ೫ ಎಸಿಪಿ, ೧೫ ಇನ್ಸ್ಪೆಕ್ಟರ್ ಗಳು ಸೇರಿ ಅರವತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ಈ ಪರಿಶೀಲನೆಯಲ್ಲಿ ತೊಡಗಿದೆ. ಬ್ಯಾಂಕ್ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ಅವೆಲ್ಲವನ್ನೂ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ. ಈಗಾಗಲೇ ಚೇರ್ಮನ್ ಶ್ರೀನಿವಾಸ ಮೂರ್ತಿ ಸೇರಿ ಹಲವರನ್ನು ಬಂಧಿಸಲಾಗಿದೆ.