ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ; ಶಿಕ್ಷಣ ಸಚಿವ ನಾಗೇಶ್
ಬೆಂಗಳೂರು; ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಭಗವದ್ಗೀತೆ ಬೋಧನೆ ಆರಂಭಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ನಲ್ಲಿ ಎಂ.ಕೆ.ಪ್ರಾಣೇಶ್ ಈ ವಿಚಾರ ಪ್ರಸ್ತಾಪ ಮಾಡಿದರು.
ಈ ಹಿಂದೆ ಭಗವದ್ಗೀತೆ ಬೋಧನೆಗೆ ಸಮಿತಿ ರಚಿಸುವ ಬಗ್ಗೆ ಹೇಳಲಾಗಿತ್ತು. ಆದರೆ ಈಗ ಬೇರೆಯೇ ಹೇಳಿಕೆ ಹೊರಬಂದಿದೆ. ಭಗವದ್ಗೀತೆ ಬೋಧಿಸಲು ಸರ್ಕಾರಕ್ಕೆ ಮುಜುಗರವೇನಾದರೂ ಇದೆಯೇ? ಎಂದು ಪ್ರಾಣೇಶ್ ಕೇಳಿದರು. ಇದಕ್ಕೆ ಉತ್ತರಿಸಿದ ಸಚಿವರು, ಈ ವರ್ಷದಿಂದಲೇ ನೈತಿಕ ಶಿಕ್ಷಣ ವಿಭಾಗದಲ್ಲಿ ಭಗವದ್ಗೀತೆ ಬೋಧಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಮಿತಿ ರಚನೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.