ದಾವಣಗೆರೆಯಲ್ಲಿ ಸರಣಿ ಅಪಘಾತ; ಇಬ್ಬರು ಸಾವು
ದಾವಣಗೆರೆ; ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ಸರಣಿ ಅಪಘಾತ ನಡೆದಿದ್ದು, ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಲ್ಪನಹಳ್ಳಿ ಬಳಿ ಸರಣಿ ಅಪಘಾತ ನಡೆದಿದ್ದು, ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆ ಶಿಕ್ಷಕಿ ಜ್ಯೋತಿ (43) ಮತ್ತು ಪವಾಡರಂಗವ್ವನಹಳ್ಳಿಯ ಮಂಜುನಾಥ್ (68) ಸಾವನ್ನಪ್ಪಿದ್ದಾರೆ.
ಶಿಕ್ಷಕಿ ಜ್ಯೋತಿ ಕುಟುಂಬ ಸಮೇತ ತಮಿಳುನಾಡು, ಮದುರೈಗೆ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಜ್ಯೋತಿ ಪತಿಗೆ ಹೃದಯಾಘಾತವಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಆ್ಯಂಬುಲೆನ್ಸ್ ಮೂಲಕ ಜ್ಯೋತಿ ಪತಿಯನ್ನು ಕರೆತರಲಾಗುತ್ತಿತ್ತು. ಆ್ಯಂಬುಲೆನ್ಸ್ ಚಾಲಕ ಟ್ರ್ಯಾಕ್ಟರ್ ಹಿಂದಿಕ್ಕಲು ಯತ್ನಿಸಿದ್ದಾನೆ. ಆಗ ಟ್ರ್ಯಾಲಿಗೆ ಆ್ಯಂಬುಲೆನ್ಸ್ ರಭಸವಾಗಿ ಡಿಕ್ಕಿಯಾಗಿದೆ. ಈ ವೇಳೆ ಆ್ಯಂಬುಲೆನ್ಸ್ನಲ್ಲಿದ್ದ ಶಿಕ್ಷಕಿ ಜ್ಯೋತಿ ತಲೆಗೆ ಬಲವಾದ ಪೆಟ್ಟಾಗಿತ್ತು. ಹೀಗಾಗಿ ಅವರನ್ನು ಮತ್ತೊಂದು ಆ್ಯಂಬುಲೆನ್ಸ್ ಮೂಲಕ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಇನ್ನೊಂದೆಡೆ ಅಪಘಾತದ ರಭಸಕ್ಕೆ ಚಾಲಕ ಗಾಬರಿಗೊಂಡಿದ್ದ. ಇದರಿಂದಾಗಿ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ದಾವಣಗೆರೆಗೆ ತೆರಳುತ್ತಿದ್ದ ಪವಾಡರಂಗವ್ವನಹಳ್ಳಿಯ ಮಂಜುನಾಥ್ ಅವರ ಬೈಕ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ್ಯಂಬುಲೆನ್ಸ್ ಚಾಲಕ ಮಹಮದ್ ಮೀರನ್ ಕೂಡಾ ಗಂಭೀರವಾಗಿ ಗಾಯಗೊಂಡಿದ್ದಾರೆ.