NationalPolitics

ಗೋವಾದಲ್ಲಿ 11 ಕಾಂಗ್ರೆಸ್‌ ಶಾಸಕರ ಪೈಕಿ 8 ಮಂದಿ ಬಿಜೆಪಿ ಸೇರ್ಪಡೆ

ಪಣಜಿ; ಅಂದುಕೊಂಡಂತೆ ಇಂದೇ ಗೋವಾದ ಎಂಟು ಕಾಂಗ್ರೆಸ್‌ ಶಾಸಕರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಶಾಸಕರ ಸಂಖ್ಯೆ ಮೂರಕ್ಕೆ ಕುಸಿದಿದೆ. ಆ ಮೂವರು ಕೂಡಾ ಯಾವಾಗ ಪಕ್ಷ ಬಿಡುತ್ತಾರೋ ಎಂಬ ಆತಂಕ ಕಾಂಗ್ರೆಸ್‌ನಲ್ಲಿ ಮನೆ ಮಾಡಿದೆ.

ಇಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉಪಸ್ಥಿತಿಯಲ್ಲಿ ಎಂಟು ಕಾಂಗ್ರೆಸ್‌ ಶಾಸಕರನ್ನು ಬಿಜೆಪಿಗೆ ಬರಮಾಡಿಕೊಳ್ಳಲಾಗಿದೆ. ಬಿಜೆಪಿ ಕಚೇರಿಯಲ್ಲಿ ಶಾಸಕರಿಗೆ ಕೇಸರಿ ಬಾವುಟ ನೀಡಿ ಸ್ವಾಗತಿಸಲಾಯಿತು. ಶಾಸಕರಾದ ಮೈಕಲ್ ಲೋಬೊ, ಮಾಜಿ ಸಿಎಂ ದಿಗಂಬರ್ ಕಾಮತ್, ದಿಲಿಹಾ ಲೋಬೊ, ರಾಜೇಶ್ ಪಾಲ್‌ದೇಸಾಯಿ, ಕೇದಾರ್ ನಾಯಕ್, ಸಂಕಲ್ಪ ಅಮೋಂಕರ್, ಅಲೆಕ್ಸೊ ಸಿಕ್ವೇರಾ, ರುಡಾಲ್ಫ್ ಫರ್ನಾಂಡಿಸ್ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಗೋವಾ ಕಾಂಗ್ರೆಸ್‌ನಲ್ಲಿ ಮೂವರೇ ಶಾಸಕರು ಉಳಿದಂತಾಗಿದೆ.

‘ಕಾಂಗ್ರೆಸ್ ಚೊಡೋ, ಬಿಜೆಪಿಕೊ ಜೋಡೊ, (ಕಾಂಗ್ರೆಸ್ ಬಿಡಿ– ಬಿಜೆಪಿ ಸೇರಿ) ಗೋವಾದ ಸಮಗ್ರ ಅಭಿವೃದ್ಧಿಗಾಗಿ ನಾವು 8 ಶಾಸಕರು ಬಿಜೆಪಿ ಸೇರಿದ್ದೇವೆ’ ಎಂದು ಮೈಕಲ್ ಲೊಬೋ ಹೇಳಿದ್ದಾರೆ. 40 ಶಾಸಕ ಸದಸ್ಯತ್ವ ಬಲದ ಗೋವಾ ವಿಧಾನಸಭೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ 10, ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿತ್ತು. ಇದರಲ್ಲಿ ಎಂಟು ಶಾಸಕರು ಬಿಜೆಪಿಗೆ ಜಿಗಿದಿದ್ದಾರೆ. 2019 ರಲ್ಲೂ 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಜಿಗಿದಿದ್ದರು. ಇನ್ನೊಂದೆಡೆ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಬೇಕು ಎಂಬ ನಿರ್ಣಯವನ್ನೇ ಕೈಗೊಂಡಿದ್ದಾರೆ.

Share Post