ಅಕ್ಟೋಬರ್ 16ರಂದು ಕೆಪಿಸಿಸಿ ಅಧ್ಯಕ್ಷರ ಚುನಾವಣೆ; ಡಿ.ಕೆ.ಶಿವಕುಮಾರ್
ರಾಯಚೂರು; ಅಕ್ಟೋಬರ್ 16 ರಂದು ಕೆಪಿಸಿಸಿ ನೂತನ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭಾರತ ಜೋಡೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ರಾಯಚೂರಿಗೆ ಬಂದಿದ್ದ ಅವರು, ಈ ಬಗ್ಗೆ ಮಾಹಿತಿ ನೀಡಿದರು.
ನಾನು ಕೆಪಿಸಿಸಿ ಅಧ್ಯಕ್ಷನಾಗಿ ಎರಡು ವರ್ಷಗಳು ಪೂರ್ಣವಾಗುತ್ತಿದೆ. ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದರ ಬಗ್ಗೆ ಕೊನೆಯ ದಿನದಂದು ನಿರ್ಧಾರವಾಗುತ್ತದೆ. ಎಐಸಿಸಿ ಈಗಾಗಲೇ ಪ್ರಕಟಿಸಿದಂತೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಹಗರಣಗಳನ್ನು ಬಯಲಿಗೆ ತರಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜನಸ್ಪಂದನ ಕಾರ್ಯಕ್ರಮದಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ಕಳೆದ ಮೂರು ವರ್ಷಗಳಿಂದಲೂ ಬಿಜೆಪಿಯವರು ಹಗರಣ ಬಯಲಿಗೆ ಎಳೆಯುವುದಾಗಿ ಹೇಳುತ್ತಿದ್ದಾರೆ. ಹಗರಣ ಬಯಲು ಮಾಡುವುದು ಸರ್ಕಾರದ ಕರ್ತವ್ಯ, ಇಂದಿನಿಂದಲೇ ಆ ಕೆಲಸ ಮಾಡಲಿ ಎಂದರು.
ಅಕ್ಟೋಬರ್ 22 ಮತ್ತು 23 ರಂದು ಭಾರತ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆಗೆ ಬರಲಿದೆ. ಕೃಷ್ಣಾ ನದಿಯಿಂದ ತುಂಗಭದ್ರಾ ನದಿವರೆಗೂ ಪಾದಯಾತ್ರೆ ನಡೆಯಲಿದೆ. ರಾಹುಲ್ ಗಾಂಧಿಯವರು ತಮ್ಮ ಕಬ್ಬಿಣದ ಕಾಲುಗಳ ಮೂಲಕ ಸಮಾಜದ ಎಲ್ಲ ಜನರನ್ನು ಜೋಡಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಕೊಪ್ಪಳ, ಕಲಬುರಗಿ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಯ ಕಾಂಗ್ರೆಸ್ ನಾಯಕರು ಹಾಗೂ ಬೆಂಬಲಿಗರು ರಾಯಚೂರಿನ ಪಾದಯಾತ್ರೆಯಲ್ಲಿ ಭಾಗಹಿಸುವರು. ಹಾಲಿ ಶಾಸಕರು ಮತ್ತು ಟಿಕೆಟ್ ಆಕಾಂಕ್ಷಿಗಳು ಈ ಪಾದಯಾತ್ರೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.