ನಿವೃತ್ತ ಶಿಕ್ಷಕಿಯ ಉಸಿರುಗಟ್ಟಿಸಿ ಕೊಲೆ; ಚಿನ್ನಾಭರಣ ದರೋಡೆ
ಬೆಂಗಳೂರು; ನಿವೃತ್ತ ಶಿಕ್ಷಕಿಯೊಬ್ಬರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಚಿನ್ನಾಭರಣ ದೋಚಿರುವ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿವೃತ್ತ ಪ್ರಸನ್ನ ಕುಮಾರಿ (60) ಅವರನ್ನು ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಪ್ರಸನ್ನ ಕುಮಾರಿ ಅವರು ಆಂಧ್ರಪ್ರದೇಶದ ವಿಜಯವಾಡ ಮೂಲದವರು. ಅವರು ಚಿಂತಾಮಣಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇತ್ತೀಚೆಗೆ ನಿವೃತ್ತಿಯಾಗಿದ್ದರು. ನಂತರ ಒಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಕಳೆದ ರಾತ್ರಿ ಮನೆಗೆ ಬಂದಿದ್ದ ದುಷ್ಕರ್ಮಿಗಳು ಆಕೆಯ ಕೈಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ವಿದ್ಯಾರಣ್ಯಪುರ ಠಾಣಾ ಪೊಲೀಸರು ಅಕ್ಕಪಕ್ಕದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.