BengaluruPolitics

ಮಳೆಗೆ ಜನ ಒದ್ದಾಡ್ತಿದ್ರೆ ದೋಸೆ ತಿನ್ನಲು ಹೋದ ತೇಜಸ್ವಿ ಸೂರ್ಯ; ನೆಟ್ಟಿಗರು ಗರಂ

ಬೆಂಗಳೂರು; ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಜನ ತತ್ತರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಹೋಟೆಲ್‌ ಒಂದರಲ್ಲಿ ದೋಸೆ ತಿಂದು ಅದರ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಡಿಯೊದಲ್ಲಿ ತೇಜಸ್ವಿ ಸೂರ್ಯ, ‘ಪದ್ಮನಾಭ ನಗರದ ಸಾತ್ವಿ ಕಿಚನ್‌ಗೆ ಬಂದಿದ್ದೆ. ಇನ್‌ಸ್ಟಾಗ್ರಾಂನಲ್ಲಿ ದೋಸೆಯ ಫೋಟೊ ನೋಡಿ ಟೆಂಪ್ಟ್‌ ಆಗಿ ಇಲ್ಲಿಗೆ ಬಂದಿದ್ದು. ತುಂಬಾ ಚೆನ್ನಾಗಿದೆ ಬೆಣ್ಣೆ ಮಸಾಲೆ. ನೀವೂ ಬನ್ನಿ. ತಿಂದಾಗ್ಲೇನೆ ಆಸ್ವಾದನೆ ನಿಮಗೆ ಗೊತ್ತಾಗುವುದು. ಉಪ್ಪಿಟ್ಟು ಬಹಳ ಚೆನ್ನಾಗಿದೆ. ಬನ್ನಿ’ ಎಂದು ಜನರನ್ನು ಆಹ್ವಾನಿಸುತ್ತಿರುವುದು ಇದೆ.

ಇದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಜನರು ಸಂಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಜವಾಬ್ದಾರಿ ಸಂಸದ ಹೋಟೆಲ್‌ ಒಂದನ್ನು ಪ್ರಚಾರ ಮಾಡುತ್ತಾ, ದೋಸೆಯ ರುಚಿಯನ್ನು ಸವಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೋಮ್‌ಗೆ ಬೆಂಕಿ ಬಿದ್ದಾಗ ದೊರೆ ನೀರೋ ಪಿಟೀಲು ಬಾರಿಸುತ್ತಿದ್ದ ಎಂಬುದು ಹಳೆಯ ಮಾತಾಗಿದೆ. ಬೆಂಗಳೂರಲ್ಲಿ ಪ್ರವಾಹವಾದಾಗ ನಮ್ಮ ದಕ್ಷಿಣದ ಸಂಸದ ಸಂಭ್ರಮ ಪಡುತ್ತಿದ್ದರು ಎಂಬುದು ಈಗಿನ ಮಾತಾಗಿದೆ. ಈ ವಿಡಿಯೊ ಸೆಪ್ಟೆಂಬರ್‌ 5ರಂದು ಸೋಮವಾರ ತೆಗೆದದ್ದಾಗಿದೆ ಎಂದು ನಿತ್ಯಾನಂದ ಶೆಟ್ಟಿ ಎಂಬುವವರು ಫೇಸ್‌ಬುಕ್‌ನಲ್ಲಿ ಅಸಮಾಧಾನದಿಂದ ಬರೆದುಕೊಂಡಿದ್ದಾರೆ.

Share Post