ಬೆಂಗಳೂರು ಮುಳುಗಿರುವುದು 40 ಪರ್ಸೆಂಟ್ ಭ್ರಷ್ಟಾಚಾರದಲ್ಲಿ; ಕಾಂಗ್ರೆಸ್
ಬೆಂಗಳೂರು; ಮಳೆ ಅವಾಂತರದ ಬಗ್ಗೆ ರಾಜ್ಯ ಸರ್ಕಾರ ಮೌನ ವಹಿಸಿದೆ. ಮಳೆ ಅನಾಹುತಗಳನ್ನು ತಡೆಯಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಈ ಬಗ್ಗೆ ರಾಜ್ಯ ಕಾಂಗ್ರೆಸ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಲಾಗಿದೆ.
ಟ್ವೀಟ್-೧:
‘ಬೆಂಗಳೂರು ಮುಳುಗಿರುವುದು ಮಳೆಯಲ್ಲಲ್ಲ, ಬಿಜೆಪಿಯ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದಲ್ಲಿ. ಹಲವು ತಿಂಗಳ ಹಿಂದೆ ಬಿಜೆಪಿ ನಾಯಕ ಎಸ್.ಎಂ.ಕೃಷ್ಣ ಬೆಂಗಳೂರಿನ ದುರಾವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದರು. ಹಲವು ಉದ್ಯಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಐಟಿ ಕಂಪೆನಿಗಳು ಪತ್ರ ಬರೆದಿವೆ. ಬಸವರಾಜ ಬೊಮ್ಮಾಯಿ ಅವರೇ, ತಾವು ಎಚ್ಚರವಾಗಲು ಇನ್ನೇನಾಗಬೇಕು’
ಟ್ವೀಟ್-೨:
‘ಮಳೆಗೆ ಬೆಂಗಳೂರು ಮತ್ತೆ ನಲುಗಿದೆ. ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಈ ರಾಜ್ಯಕ್ಕೆ ಗೃಹ ಸಚಿವರೋ ಅಥವಾ ತಮ್ಮ ಕ್ಷೇತ್ರಕ್ಕೆ ಮಾತ್ರ ಗೃಹ ಸಚಿವರೋ ತಿಳಿಯದಾಗಿದೆ. ಬೆಂಗಳೂರಿನ ಸಪ್ತ ಸಚಿವರು ನಾಪತ್ತೆಯಾಗಿದ್ದಾರೆ. ಬಿಜೆಪಿ ಜನೋತ್ಸವದ ತಯಾರಿಯಲ್ಲಿದೆ’ ಎಂದು ಆರೋಪಿಸಿದೆ.
ಟ್ವೀಟ್-೩:
‘ಬೆಂಗಳೂರು ನಗರವನ್ನು ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್, ಹಲಾಲ್ ಕಟ್ ವಿಚಾರ ಮಾತಾಡಲು ಓಡೋಡಿ ಬರ್ತಾರೆ. ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ, ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ? ಬೆಂಗಳೂರಿನ ಬಗ್ಗೆ ಮಾತಾಡಲೂ ಸಚಿವರಿಗೆ 40 ಪರ್ಸೆಂಟ್ ಕಮಿಷನ್ ಕೊಡಬೇಕೆ’