ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಸಾವು ಪ್ರಕರಣ; ತನಿಖೆಗೆ ಆದೇಶಿಸಿದ ಗೋವಾ ಸಿಎಂ
ಪಣಜಿ; ಹರಿಯಾಣ ಬಿಜೆಪಿ ನಾಯಕಿ ಹಾಗೂ ಟಿಕ್‌ಟಾಕ್ ಸ್ಟಾರ್ ಸೋನಾಲಿ ಪೋಗಟ್ (42) ಅವರ ಸಾವಿನ ಬಗ್ಗೆ ಗೋವಾ ಸಿಎಂ ಪ್ರಮೋದ್ ಸಾವಂತ್ ತನಿಖೆ ನಡೆಸಲು ಆದೇಶಿಸಿದ್ದಾರೆ. ಮಂಗಳವಾರ ಉತ್ತರ ಗೋವಾದ ಸೇಂಟ್ ಆಂಟೋನಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಸೋನಾಲಿ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿದ್ದವು. ಈ ಬಗ್ಗೆ ತನಿಖೆ ನಡೆಸಬೇಕೆಂದು ಸೋನಾಲಿ ಕುಟುಂಬಸ್ಥರು ಆಗ್ರಹಿಸಿದ್ದರು. ಈ ಬೆನ್ನಲ್ಲೇ ಗೋವಾ ಸಿಎಂ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಸೋನಾಲಿ ಸಾವಿನ ಬಗ್ಗೆ ಹರಿಯಾಣದ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ. ಸಿಬಿಐನಿಂದ ತನಿಖೆ ಮಾಡಿಸಬೇಕೆಂದು ಆಗ್ರಹಿಸಲಾಗಿದೆ. ಈ ಬೆನ್ನಲ್ಲೇ ಗೋವಾ ಸಿಎಂ ನಾವೇ ವಿಶೇಷ ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಬುಧವಾರ ಸೋನಾಲಿ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುತ್ತದೆ. ಅವರ ಕುಟುಂಬದವರು ಗೋವಾಕ್ಕೆ ಬಂದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಆಗಸ್ಟ್ 22ಕ್ಕೆ ಗೋವಾ ಪ್ರವಾಸಕ್ಕೆ ಬಂದಿದ್ದ ಸೋನಾಲಿ, ಮಂಗಳವಾರ ಬೆಳಿಗ್ಗೆ ಹೋಟೆಲ್ ಒಂದರಿಂದ ಆಸ್ಪತ್ರೆಗೆ ಹೋದಾಗ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ಈಗಾಗಲೇ ‘ಅನುಮಾನಾಸ್ಪದ ಸಾವು’ ಪ್ರಕರಣವನ್ನು ಗೋವಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.