ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿದ ಬಿಎಸ್‌ವೈ
ಮೈಸೂರು; ಸಾವರ್ಕರ್ ವಿಚಾರದಲ್ಲಿ ರಾಜ್ಯದಲ್ಲಿ ದೊಡ್ಡ ರಾಜಕೀಯ ಸಂಘರ್ಷ ಶುರುವಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸಾವರ್ಕರ್ ಫೋಟೋ ಬಳಸಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಇದಕ್ಕೆ ತಿರುಗೇಟು ನೀಡಲು ಬಿಜೆಪಿ ಮುಂದಾಗಿದೆ. ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ರಥ ಯಾತ್ರೆ ಶುರು ಮಾಡಿದ್ದು, ಇಂದು ರಥಯಾತ್ರೆಗೆ ಮಾಜಿ ಸಿಎಂ ಬಿಎಸ್‌ವೈ ಚಾಲನೆ ನೀಡಿದರು.
ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಸಾವರ್ಕರ್ ರಥ ಯಾತ್ರೆ ಆರಂಭವಾಗಿದೆ. ಈ ರಥ ಮೈಸೂರಿನ ಅನೇಕ ಭಾಗಗಳಲ್ಲಿ ಸಂಚರಿಸಲಿದೆ. ರಥದಲ್ಲಿ ಸಾವರ್ಕರ್ ಅವರ ಜೀವನ ಚರಿತ್ರೆಯ ಅಂಶಗಳನ್ನು ಮೂಡಿಸಲಿದ್ದು, ಸಾವರ್ಕರ್ ಇತಿಹಾಸವನ್ನು ಜನರಿಗೆ ಮುಟ್ಟಿಸುವ ಉದ್ದೇಶದಿಂದ ಈ ರಥಯಾತ್ರೆ ಆಯೋಜಿಸಲಾಗಿದೆ.
ಮೈಸೂರಲ್ಲಿ ಇಂದಿನಿಂದ 8 ದಿನ ಸಾವರ್ಕರ್ ರಥ ಯಾತ್ರೆ ನಡೆಯಲಿದೆ. ದೊಡ್ಡ ಎಲ್‍ಇಡಿ ಪರದೆಯನ್ನು ರಥದಲ್ಲಿ ಅಳವಡಿಸಿದ್ದು, ಎಲ್‍ಇಡಿಯಲ್ಲಿ ಸಾವರ್ಕರ್ ಕುರಿತು ಟಿವಿಗಳಲ್ಲಿ ಬಂದ ಚರ್ಚೆಗಳು, ಸಾವರ್ಕರ್ ಅವರ ಜೀವನ ಪ್ರಮುಖ ಅಂಶಗಳ ವೀಡಿಯೋಗಳನ್ನು ಹಾಕಲಾಗುತ್ತಿದೆ. ನಗರದ ಪ್ರಮುಖ ವೃತ್ತಗಳಲ್ಲಿ ಈ ರಥ ನಿಲ್ಲಲಿದ್ದು, ಜನರಿಗೆ ಸಂಕ್ಷಿಪ್ತವಾಗಿ ಸಾವರ್ಕರ್ ಅವರ ಜೀವನವನ್ನು ತಿಳಿಸುವ ಕೆಲಸ ಮಾಡಲಾಗುತ್ತದೆ. ಈ ಮೂಲಕ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರ ತವರಲ್ಲೇ ಸಿದ್ದರಾಮಯ್ಯ ಅವರಿಗೆ ಠಕ್ಕರ್ ನೀಡಲು ಬಿಜೆಪಿ ಸಿದ್ಧವಾಗಿದೆ.