ಕಾಂಗ್ರೆಸ್ ಮಡಿಕೇರಿ ಚಲೋ ಮಾಡಲ್ಲ; ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು..?
ಬೆಂಗಳೂರು; ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದಿದ್ದರಿಂದಾಗಿ ಕಾಂಗ್ರೆಸ್ ಆಗಸ್ಟ್ ೨೬ರಂದು ಮಡಿಕೇರಿ ಚಲೋಗೆ ಕರೆ ನೀಡಿತ್ತು. ಆದ್ರೆ ಅದನ್ನು ಮುಂದೂಡಲು ಕಾಂಗ್ರೆಸ್ ಈಗ ನಿರ್ಧಾರ ಮಾಡಿದೆ. ಕೊಡಗಿ ಎಸ್ಪಿ ಮೂರು ದಿನ ನಿಷೇಧಾಜ್ಞೆ ಜಾರಿ ಮಾಡುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಡಿಕೇರಿ ಚಲೋ ಮಾಡುತ್ತಿಲ್ಲ. ಮಡಿಕೇರಿ ಚಲೋ ಮುಂದೂಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಮಡಿಕೇರಿ ಚಲೋ ನನ್ನ ನಿರ್ಧಾರವಲ್ಲ. ಅದು ಪಕ್ಷದ ನಿರ್ಧಾರ ಎಂದು ಸಿದ್ದರಾಮಯ್ಯ, ನನ್ನ ಮೇಲೆ ಮೊಟ್ಟೆ, ಕಲ್ಲು ಎಸೆಯುವುದಕ್ಕೆ ಕಾರಣವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಾವಣಗೆರೆ ಕಾರ್ಯಕ್ರಮದಿಂದ ಬಿಜೆಪಿಯವರಿಗೆ ಹೊಟ್ಟೆ ಉರಿ ಶುರುವಾಗದೆ. ನನ್ನ ವರ್ಚಸ್ಸು ಕುಗ್ಗಿಸಲು ಈ ರೀತಿ ಮಾಡುತ್ತಿದ್ದಾರೆ. ಈ ಹಿಂದೆ ಕೊಡಗಿಗೆ ಹೋದಾಗ ಪ್ರತಿಭಟನೆ ಮಾಡಿರಲಿಲ್ಲ. ನಮ್ಮ ಹೋರಾಟ ಕೊಡಗಿನ ಜನರ ವಿರುದ್ಧ ಅಲ್ಲ. ನಮ್ಮ ಹೋರಾಟ ಬಡವರ, ಹಿಂದುಳಿದವರ ಪರ ಎಂದು ಸಿದ್ದರಾಮಯ್ಯ ಇದೇ ವೇಳೆ ಹೇಳಿದರು. ಕೊಡಗಿಗೆ ಬರಲಿ ನೋಡಿಕೊಳ್ಳುತ್ತೇವೆ ಎಂದು ಬೋಪಯ್ಯ ಹೇಳುತ್ತಾರೆ. ನಾನು ವಿಪಕ್ಷ ನಾಯಕ ಇದ್ದೇನೆ. ನನಗೇ ಈ ರೀತಿ ಹೇಳ್ತಾರೆ ಅಂದ್ರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಇದೇ ರೀತಿ ಬಳ್ಳಾರಿಯ ಬ್ರದರ್ಸ್ ಸವಾಲು ಹಾಕಿದ್ದರು. ರೆಡ್ಡಿ ಬ್ರದರ್ಸ್ ಸವಾಲು ಹಾಕಿದ್ದಕ್ಕೆ ಪಾದಯಾತ್ರೆ ಮಾಡಿದ್ದೆ. ಆಗಲೇ ಹೆದರಲಿಲ್ಲ. ಈಗ ಹೆದರುತ್ತೇನಾ ಎಂದು ಸಿದ್ದರಾಮಯ್ಯ ಹೇಳಿದರು.