ಮುಂಬೈ ಪ್ರತಿಷ್ಠಿತ ಹೋಟೆಲ್ಗೆ ಬಾಂಬ್ ಬೆದರಿಕೆ ಕರೆ; 5 ಕೋಟಿ ರೂ.ಗೆ ಬೇಡಿಕೆ
ಮುಂಬೈ; ಇತ್ತೀಚೆಗೆ ತಾನೇ ಮುಂಬೈ ಪೊಲೀಸರಿಗೆ ಬಾಂಬ್ ದಾಳಿ ಬೆದರಿಕೆ ಸಂದೇಶಗಳು ರವಾನೆಯಾಗಿದ್ದವು. ಈ ಬೆನ್ನಲ್ಲೇ ಮುಂಬೈನ ಪ್ರತಿಷ್ಠಿಯ ಹೋಟೆಲ್ ಒಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ವ್ಯಕ್ತಿಯೊಬ್ಬ ಹೋಟೆಲ್ಗೆ ಕರೆ ಮಾಡಿ ಹೋಟೆಲ್ನ ನಾಲ್ಕು ಕಡೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಹೇಳಿದ್ದಾನೆ.
5 ಕೋಟಿ ರೂಪಾಯಿ ಕೊಟ್ಟರೆ ಬಾಂಬ್ ನಿಷ್ಕ್ರಿಯಗೊಳಿಸುತ್ತೇವೆ. ಇಲ್ಲದಿದ್ದರೆ ಸ್ಫೋಟಿಸುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾನೆ. ಈ ಸಂಬಂಧ ಹೋಟೆಲ್ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಮುಂಬೈ ಪೊಲೀಸರು ಶಹರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಯು/ಎಸ್ 336, 507ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ದಿನಗಳ ಹಿಂದಷ್ಟೇ, ಮುಂಬೈ ಪೊಲೀಸರಿಗೆ 26/11 ಮಾದರಿ ದಾಳಿ ನಡೆಸುವ ಬೆದರಿಕೆಯ ಸಂದೇಶ ಬಂದಿತ್ತು. ಪಾಕಿಸ್ತಾನದ ಕೋಡ್ ಒಳಗೊಂಡ ದೂರವಾಣಿ ಸಂಖ್ಯೆಯಿಂದ ಈ ಸಂದೇಶ ರವಾನೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಸಮೀಪದ ವಿರಾರ್ನಲ್ಲಿ ಓರ್ವನನ್ನು ಬಂಧಿಸಲಾಗಿತ್ತು.