ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕೆಂದು ಜನ ಹೇಳ್ತಿದ್ದಾರಾ..?; ಕೆಸಿಆರ್ ಮಾತಿನ ಹಿಂದಿನ ಮರ್ಮವೇನು..?
ಹೈದರಾಬಾದ್; ಕರ್ನಾಟಕದ ರಾಯಚೂರು ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಿಕೊಳ್ಳಿ ಎಂದು ಅಲ್ಲಿನ ಜನ ಒತ್ತಾಯಿಸುತ್ತಿದ್ದಾರೆ ಎಂದು ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್ ಹೇಳಿದ್ದಾರೆ. ವಿಕಾರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ಈ ರೀತಿಯ ಉದ್ಧಟತನದ ಹೇಳಿಕೆ ನೀಡಿದ್ದಾರೆ.
2016 ರಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಕಾರಾಬಾದ್ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಕಚೇರಿ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ತೆಲಂಗಾಣದಲ್ಲಿ ನಡೆಯುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ನೋಡಿ ರಾಯಚೂರು ಗಡಿ ಜನ ತೆಲಂಗಾಣ ರಾಜ್ಯ ಸೇರಬೇಕು ಎನ್ನುತ್ತಿದ್ದಾರೆ. ಹೀಗಾಗಿ ಬಿಜೆಪಿ ಧ್ವಜಗಳಿಗೆ ಮೋಸ ಹೋಗಬೇಡಿ ಎಂದು ಅಲ್ಲಿನ ಜನಕ್ಕೆ ಎಚ್ಚರಿಕೆ ನೀಡಿದರು.
ಈ ಹಿಂದೆ ಟ್ವೀಟ್ ಮಾಡಿದ್ದ ಕೆಸಿಎಆರ್ ಪುತ್ರ ಹಾಗೂ ತೆಲಂಗಾಣದ ಸಚಿವ ಕೆ.ಟಿ ರಾಮಾರಾವ್ ಅವರು, ‘ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ ರಾಯಚೂರನ್ನು ತೆಲಂಗಾಣದ ಜೊತೆ ವಿಲೀನ ಮಾಡಬೇಕೆಂದು ಕೇಳಿಕೊಂಡಿದ್ದಾರೆ’ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಡಾ.ಶಿವರಾಜ ಪಾಟೀಲ ಅವರು ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಹೇಳಿದ್ದರು. ಈಗ ಅದೇ ವಿಡಿಯೊ ಇಟ್ಟುಕೊಂಡು ಟಿಆರ್ಎಸ್ನವರು ರಾಯಚೂರು ತೆಲಂಗಾಣಕ್ಕೆ ಸೇರಬೇಕು ಎಂಬ ಅರ್ಥದಲ್ಲಿ ಮಾತನಾಡುತ್ತಿದ್ದಾರೆ. ಕೆಸಿಆರ್ ಅವರ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ, ಕರ್ನಾಟಕ ಸಿಎಂ ಬೊಮ್ಮಾಯಿ ಅವರು ಈ ಬಗ್ಗೆ ಏನೂ ಹೇಳದಿರುವುದು ದುರಾದೃಷ್ಟಕರ ಎಂದು ಟ್ವೀಟ್ ಮಾಡಿದ್ದಾರೆ.