BengaluruPolitics

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರ; ಮೂವರಲ್ಲಿ ಯಾರಿಗೆ ಹುದ್ದೆ..?

ಬೆಂಗಳೂರು; ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಅಧಿಕಾರವಧಿ ಮುಕ್ತಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್‌ನಲ್ಲಿ ರಾಜ್ಯಾಧ್ಯಕ್ಷರನ್ನು ಬದಲಿಸಬೇಕೇ ಅಥವಾ ನಳಿನ್‌ ಕುಮಾರ್‌ ಅವರನ್ನೇ ಮುಂದುವರೆಸಬೇಕೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನಳಿನ್‌ ಕುಮಾರ್‌ ಅವರನ್ನು ಬದಲಿಸುವುದಾದರೆ ಯಾರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಬಹುದು ಎಂಬ ಲೆಕ್ಕಾಚಾರಗಳೂ ಶುರುವಾಗಿವೆ. ಇದೀಗ ಬಿಜೆಪಿ ಮುಂದೆ ಮೂರು ಹೆಸರುಗಳಿವೆ.

ಬಿಜೆಪಿ ಮುಂದಿರುವ ಮೊದಲ ಆಯ್ಕೆ ಸಿ.ಟಿ.ರವಿ. ಸಿ.ಟಿ.ರವಿ ಅವರು ಚಿಕ್ಕಮಗಳೂರು ಶಾಸಕರು. ಸಂಘ ಪರಿವಾರದಲ್ಲಿ ಗುರುತಿಸಿಕೊಂಡು ಆ ಮೂಲಕ ರಾಜಕೀಯಕ್ಕೆ ಬಂದವರು. ಸದ್ಯ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಸಂಘ ಪರಿವಾರ ಹಾಗೂ ಹೈಕಮಾಂಡ್‌ಗೆ ನಿಷ್ಠರಾಗಿರುವ ಸಿ.ಟಿ.ರವಿ ಅವರು ಸಂಘಟನಾ ಸಾಮರ್ಥ್ಯ ಹೊಂದಿದ್ದಾರೆ.

ಸಿ.ಟಿ.ರವಿ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಮತಗಳು ದೊಡ್ಡ ಮಟ್ಟದಲ್ಲಿವೆ. ಸಿಎಂ ಬೊಮ್ಮಾಯಿ ಲಿಂಗಾಯತ ಸಮುದಾಯದವರಾಗಿದ್ದಾರೆ. ಹೀಗಾಗಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ನೀಡಿದರೆ, ಎರಡು ದೊಡ್ಡ ಸಮುದಾಯಗಳ ವಿಶ್ವಾಸ ಗಳಿಸಬಹುದು ಎಂಬ ಲೆಕ್ಕಾಚಾರ ಕೂಡಾ ಇದೆ. ಚುನಾವಣೆ ಸಮಯದಲ್ಲಿ ಈ ಜಾತಿ ಸಮೀಕರಣ ಅತಿ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿ.ಟಿ.ರವಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

ಇನ್ನು ಎರಡನೇ ಹೆಸರು ಸಚಿವ ಸುನಿಲ್‌ ಕುಮಾರ್‌ ಅವರು. ಸುನಿಲ್‌ ಕುಮಾರ್‌ ಕಾರ್ಕಳದ ಶಾಸಕರು. ಸದ್ಯ ಬೊಮ್ಮಾಯಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇವರು ಈಡಿ ಬಿಲ್ಲವ ಸಮುದಾಯಕ್ಕೆ ಸೇರಿದವರು. ಸುನಿಲ್‌ ಕುಮಾರ್‌ ಕೂಡಾ ಆರ್‌ಎಸ್‌ಎಸ್‌ ಮೂಲದಿಂದ ರಾಜಕೀಯಕ್ಕೆ ಬಂದವರು. ಬಿಜೆಪಿಯಲ್ಲಿ ಹಿಂದುಳಿದ ಸಮುದಾಯದವರಿಗೆ ಅಧಿಕಾರ ಕೊಡೋದಿಲ್ಲ ಅನ್ನೋ ಅಪವಾದವಿದೆ. ಜೊತೆಗೆ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಈಡಿಗ ಸಮುದಾಯದ ಮತಗಳು ನಿರ್ಣಾಯಕವಾಗುತ್ತವೆ. ಈ ಕಾರಣದಿಂದ ಸುನಿಲ್‌ ಕುಮಾರ್‌ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿದರೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯಬಹುದು ಅನ್ನೋ ಲೆಕ್ಕಾಚಾರ ಬಿಜೆಪಿಯಲ್ಲಿದೆ.

ಇನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇವರೂ ಕೂಡಾ ವಿದ್ಯಾರ್ಥಿದೆಸೆಯಿಂದಲೇ ಎಬಿವಿಪಿಯಲ್ಲಿ ಗುರುತಿಸಿಕೊಂಡು ಬಿಜೆಪಿಗೆ ಬಂದವರು. ಹೈಕಮಾಂಡ್‌ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಡಿಯೂರಪ್ಪ ಅವರು ಮೊದಲ ಬಾರಿ ಸಿಎಂ ಆದಾಗ ಅವರ ಸಂಪುಟದಲ್ಲಿ ಪವರ್‌ ಮಿನಿಸ್ಟರ್‌ ಆಗಿದ್ದರು. ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಅವರು ಎರಡನೇ ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಇವರು ಇದಕ್ಕೂ ಮೊದಲು ವಿಧಾನಪರಿಷತ್‌ ಸದಸ್ಯೆಯಾಗಿದ್ದರು. ಅನಂತರ ಯಶವಂತಪುರ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಶೋಭಾ ಕರಂದ್ಲಾಜೆಯವರು ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಜೊತೆಗೆ ಹೈಕಮಾಂಡ್‌ ಜೊತೆಗೂ ಉತ್ತಮ ನಂಟಿದೆ.

ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು, ಮಹಿಳೆ, ಸಂಘಟನೆ ಮಾಡುವ ಶಕ್ತಿ ಎಲ್ಲವನ್ನೂ ಪರಿಗಣಿಸುವುದಾದರೆ ಶೋಭಾ ಕರಂದ್ಲಾಜೆಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬಹುದು. ಹೀಗೆ ಸಿ.ಟಿ.ರವಿ, ಸುನಿಲ್‌ ಕುಮಾರ್‌ ಹಾಗೂ ಶೋಭಾ ಕರಂದ್ಲಾಜೆ ಹೆಸರುಗಳು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳುಬರುತ್ತಿವೆ. ಮುಂದಿನ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಹೈಕಮಾಂಡ್‌ ಸೂಕ್ತ ತೀರ್ಮಾನ ಕೈಗೊಳ್ಳಲಿದೆ.

 

Share Post