ದಸರಾ ಆನೆಗಳ ತೂಕ ಪರೀಕ್ಷೆ; ಯಾವ ಆನೆ ಎಷ್ಟು ತೂಕ ಗೊತ್ತಾ..?
ಮೈಸೂರು; ದಸರಾ ಹಿನ್ನೆಲೆಯಲ್ಲಿ ಮೈಸೂರಿಗೆ ನಿನ್ನೆ ಗಜಪಡೆ ಆಗಮಿಸಿದೆ. ಅರಮನೆಯಲ್ಲಿ ಬಿಡಾರ ಹೂಡಿರುವ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಇವತ್ತು ತೂಕ ಪರೀಕ್ಷೆ ನಡೆಸಲಾಯಿತು. ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್ ನಲ್ಲಿ ಆನೆಗಳ ತೂಕ ಹಾಕಲಾಗಿದ್ದು, ಅರ್ಜುನ ಅತಿಹೆಚ್ಚು ತೂಕ ಹೊಂದಿದ್ದಾನೆ.
ಎಂಟು ಬಾರಿ ಅಂಬಾರಿ ಹೊತ್ತು 2020ರಿಂದ ಉಳಿದ ಆನೆಗಳಿಗೆ ದಸರಾ ಅನುಭವವನ್ನು ಧಾರೆ ಎರೆಯುತ್ತಿರುವ 63 ವರ್ಷ ವಯಸ್ಸಿನ ‘ಅರ್ಜುನ’, ಬರೋಬ್ಬರಿ 5,725 ಕೆ.ಜಿ ತೂಗಿದ್ದಾನೆ. ನಂತರದ ಸ್ಥಾನದಲ್ಲಿ ಗೋಪಾಲಸ್ವಾಮಿ 5,240 ಕೆ.ಜಿ, ‘ಧನಂಜಯ’ 4,800 ಕೆ.ಜಿ ಭಾರವಿದ್ದಾರೆ. ‘ಅಭಿಮನ್ಯು’ 4,770 ಕೆ.ಜಿ ಭಾರವಿದ್ದು, ದಸರಾ ಆನೆಗಳಲ್ಲೇ ನಾಲ್ಕನೇ ಹೆಚ್ಚು ತೂಕದ ಆನೆಯಾಗಿದೆ. ಕಳೆದ ವರ್ಷಕ್ಕಿಂತಲೂ 50 ಕೆ.ಜಿ ಭಾರ ಹೆಚ್ಚಿಸಿಕೊಂಡಿದ್ದಾನೆ.
ಇದೇ ಮೊದಲ ಬಾರಿ ದಸರೆಯಲ್ಲಿ ಪಾಲ್ಗೊಂಡಿರುವ ‘ಮಹೇಂದ್ರ’ 4,260 ಕೆ.ಜಿ ಭಾರವಿದ್ದರೆ, 2017ರ ನಂತರ ದಸರೆಗೆ ಬಂದಿರುವ 22 ವರ್ಷದ ‘ಭೀಮ’ 3,950 ಕೆ.ಜಿ. ತೂಗಿದ್ದಾನೆ. ಹೆಣ್ಣಾನೆಗಳಲ್ಲಿ ‘ಕಾವೇರಿ’ 3,110, ‘ಚೈತ್ರಾ’ 3,050 ಹಾಗೂ ಲಕ್ಷ್ಮಿ 2,920 ಕೆ.ಜಿ. ತೂಕವಿದ್ದಾರೆ. ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು, ಅವುಗಳ ಆರೈಕೆಗೆ ಮಾನದಂಡ ತಿಳಿದುಕೊಳ್ಳಲು, ಸಮರ್ಪಕ ಆಹಾರ ಪೂರೈಕೆ ಮಾಡಲು ಪ್ರತಿ ಬಾರಿ ತೂಕ ಮಾಡುವುದು ವಾಡಿಕೆ. ಅದರಂತೆ ತೂಕ ಪರೀಕ್ಷೆ ಪ್ರಕ್ರಿಯೆ ನಡೆಯಿತು.