National

ಮತ್ತೆ ಗಣಿಗಾರಿಕೆ ಜನಾರ್ದನರೆಡ್ಡಿ ರೆಡಿ; ಅನುಮತಿ ಕೋರಿ ಅರ್ಜಿ

ನವದೆಹಲಿ; ಗಣಿಧಣಿ ಜನಾರ್ದನರೆಡ್ಡಿ ಮತ್ತೆ ಬಳ್ಳಾರಿಯಲ್ಲಿ ಗಣಿಗಾರಿಕೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದಕ್ಕಾಗಿ ಕಾನೂನು ಹೋರಾಟ ಶುರು ಮಾಡಿದ್ದಾರೆ. ಅವರ ಮಾಲೀಕತ್ವದ ಓಬುಳಾಪುರಂ ಮೈನಿಂಗ್‌ ಕಂಪನಿ ಈ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಬಳ್ಳಾರಿ ಗಣಿಗಾರಿಕೆ ಚಟುವಟಿಕೆಗಳನ್ನು ಪುನಾರಂಭಿಸಲು ಅನುಮತಿ ಕೋರಿದೆ.

ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ  ತಮ್ಮ ಕಂಪನಿಗೂ ಅವಕಾಶ ನೀಡುವಂತೆ ಜನಾರ್ನದನರೆಡ್ಡಿ ಕೋರ್ಟ್ ಮೊರೆ ಹೋಗಿದ್ದಾರೆ. ಗಣಿಗಾರಿಕೆ ನಿಲ್ಲಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದ ಗಡಿ ವಿವಾದ ಕಾರಣವಾಗಿತ್ತು. ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಬಗೆಹರಿದಿದ್ದು, ಅನುಮತಿ ತಡೆಹಿಡಿಯಲು ಕಾರಣಗಳಿಲ್ಲ. ಹೀಗಾಗಿ ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಬೇಕು ಎಂದು ಜನಾರ್ದನರೆಡ್ಡಿ ಮಾಲೀಕತ್ವದ ಓಬುಳಾಳಾಪುರಂ ಮೈನಿಂಗ್‌ ಕಂಪನಿ ಕೋರ್ಟ್‌ಗೆ ಮನವಿ ಮಾಡಿದೆ.

ಈ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸಿರುವ ಆಂಧ್ರಪ್ರದೇಶ ಸರ್ಕಾರ, ಗಣಿಗಾರಿಕೆ ನಡೆಸಲು ಒಪ್ಪಿಗೆ ಸೂಚಿಸಿದೆ. ಸರ್ವೇಯರ್ ಜನರಲ್ ಆಫ್ ಇಂಡಿಯಾ ಎರಡು ರಾಜ್ಯಗಳ ನಡುವೆ ಗಡಿ ರೇಖೆಯನ್ನು ಗುರುತಿಸಿದೆ. ಇದನ್ನು ಎರಡು ರಾಜ್ಯಗಳು ಒಪ್ಪಿಕೊಂಡಿವೆ. ಹೀಗಾಗಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ನಮ್ಮದು ಯಾವುದೇ ತಕರಾರು ಇಲ್ಲ ಎಂದು ಹೇಳಿದೆ. ಪ್ರಕರಣದ ವಿಚಾರಣೆಯನ್ನು ನಾಳೆ ಸುಪ್ರೀಂಕೋರ್ಟ್ ನಡೆಸಲಿದೆ.

Share Post