National

ಹರ್‌ ಘರ್‌ ತಿರಂಗಾ ಅಭಿಯಾನ; ಧ್ವಜ ಹಾರಿಸುವ ಮೊದಲು ಧ್ವಜ ಸಂಹಿತೆ ನಿಮಗೆ ತಿಳಿದಿರಲಿ

ನವದೆಹಲಿ; ನಾವೀಗ 75 ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ. ಹೀಗಾಗಿ ಪ್ರತಿ ಮನೆಯ ಮೇಲೂ ಆಗಸ್ಟ್‌ 13 ರಿಂದ 15ರವೆರಗೆ ತ್ರಿವರ್ಣ ಧ್ವಜ ಹಾರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದಾರೆ. ಇದಕ್ಕೆ ದೇಶದೆಲ್ಲಡೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಅನೇಕರು ಸಾಮಾಜಿಕ ತಾಲತಾಣಗಳಲ್ಲಿ ಪ್ರೊಫೈಲ್‌ ಚಿತ್ರವಾಗಿ ರಾಷ್ಟ್ರಧ್ವಜವನ್ನು ಹಾಕಿಕೊಂಡಿದ್ದಾರೆ. 

  ಅಂದಹಾಗೆ, ರಾಷ್ಟ್ರಧ್ವಜ ಹಾರಿಸುವುದಕ್ಕೆ ನಮ್ಮ ಕಾನೂನಿನಲ್ಲಿ ಹಲವು ನಿಯಮಗಳಿವೆ. ಮನೆಗಳ ಮೇಲೆ ರಾಷ್ಟ್ರ ಧ್ವಜ ಹಾರಿಸುವ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಯಾಕಂದ್ರೆ ಈ ನಿಯಮ ಮೀರಿದರೆ, ಅದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನವಾಗುತ್ತದೆ. ಅಂದಹಾಗೆ ಈ ನಿಯಮಗಳು ಯಾವುವು ಎಂದು ತಿಳಿಯುವ ಮೊದಲು ಭಾರತದ ಧ್ವಜ ಸಂಹಿತೆ ಏನು ಹೇಳುತ್ತೆ ಎಂದು ತಿಳಿಯೋಣ.

ಧ್ವಜ ಸಂಹಿತೆ ಎಂದರೇನು?

ರಾಷ್ಟ್ರಧ್ವಜವನ್ನು ಹಾರಿಸಲು ಪ್ರತಿಯೊಬ್ಬರೂ ಧ್ವಜ ಸಂಹಿತೆ ೨೦೦೨ ಅನ್ನು ಅನುಸರಿಸಬೇಕು. 1971ರ ರಾಷ್ಟ್ರೀಯ ಸಂಕೇತಗಳ ಮಾನಹಾನಿ ವಿರೋಧಿ ಕಾಯ್ದೆಯ ನಿಬಂಧನೆಗಳನ್ನು ಸಹ ಎಲ್ಲರೂ ಅನುಸರಿಸಬೇಕಾಗುತ್ತದೆ. ಈ ಸಂಹಿತೆಯ ನಿಯಮ 2.1 ರ ಪ್ರಕಾರ, ಸಾಮಾನ್ಯ ನಾಗರಿಕರು ರಾಷ್ಟ್ರಧ್ವಜಕ್ಕೆ ಸಂಪೂರ್ಣ ಗೌರವದೊಂದಿಗೆ ಯಾವುದೇ ಸ್ಥಳದಲ್ಲಿ ಧ್ವಜವನ್ನು ಹಾರಿಸಬಹುದು. ಇದಕ್ಕೆ ಯಾವುದೇ ನಿಷೇಧವಿಲ್ಲ. ಆದಾಗ್ಯೂ, ರಾಷ್ಟ್ರಧ್ವಜವನ್ನು ಅವಮಾನಿಸಿದರೆ ಮೊದಲ ಅಪರಾಧಕ್ಕೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ನಿಬಂಧನೆ ಇದೆ.

ಹೊಸ ತಿದ್ದುಪಡಿ ಏನು ಹೇಳುತ್ತೆ..?

ಹೊಸ ಧ್ವಜ ಸಂಹಿತೆ ಜನವರಿ 26, 2002 ರಂದು ಜಾರಿಗೆ ಬಂದಿತು. ಈ ಹಿಂದೆ, ರಾಷ್ಟ್ರೀಯ ಚಿಹ್ನೆಗಳು ಮತ್ತು ಹೆಸರುಗಳ ಕಾಯ್ದೆ, 1950 ಮತ್ತು ರಾಷ್ಟ್ರೀಯ ಚಿಹ್ನೆಗಳ ಮಾನಹಾನಿ ವಿರೋಧಿ ಕಾಯ್ದೆ, 1971 ಇದ್ದವು. ಇತ್ತೀಚೆಗೆ ಈ ಕೋಡ್ ನಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಜುಲೈ 20, 2022 ರಂದು ಮಾಡಿದ ತಿದ್ದುಪಡಿಯ ಪ್ರಕಾರ, ರಾಷ್ಟ್ರಧ್ವಜವನ್ನು ಹಗಲು ಮತ್ತು ರಾತ್ರಿಯೂ ಹಾರಿಸಬಹುದು. ಇದನ್ನು ಮನೆ ಅಥವಾ ಸಾರ್ವಜನಿಕ ಸ್ಥಳದ ಮೇಲೆ ಹಾರಲು ಅನುಮತಿಸಲಾಗಿದೆ.

ಈ ಮೊದಲು ರಾಷ್ಟ್ರಧ್ವಜವನ್ನು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ಹಾರಿಸಲು ಅವಕಾಶ ನೀಡಲಾಗುತ್ತಿತ್ತು. 2021 ರ ಡಿಸೆಂಬರ್ 30 ರಿಂದ ರಾಷ್ಟ್ರಧ್ವಜವನ್ನು ಪಾಲಿಯೆಸ್ಟರ್ ಬಟ್ಟೆಯಿಂದ ತಯಾರಿಸಲು ಅನುಮತಿಸಲಾಗಿದೆ. ಈ ಹಿಂದೆ ರಾಷ್ಟ್ರಧ್ವಜವನ್ನು ಖಾದಿ ಬಟ್ಟೆಯಿಂದ ಮಾತ್ರ ತಯಾರಿಸಲು ಅವಕಾಶವಿತ್ತು.

ರಾಷ್ಟ್ರಧ್ವಜವನ್ನು ಹಾರಿಸುವಾಗ ನೆನಪಿನಲ್ಲಿಡಬೇಕಾದ ವಿಷಯಗಳು:

ಈ ಹಿಂದೆ ಸರ್ಕಾರದ ಧ್ವಜ ಸಂಹಿತೆ ತುಂಬಾ ಕಟ್ಟುನಿಟ್ಟಾಗಿತ್ತು. ಈಗ ಅದನ್ನು ಸರಳೀಕರಿಸಲಾಗಿದೆ. ಅದೇನೇ ಇದ್ದರೂ, ರಾಷ್ಟ್ರಧ್ವಜವನ್ನು ಹಾರಿಸುವಾಗ ಈ ಕೆಳಗಿನ ಹತ್ತು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.

1. ಧ್ವಜವನ್ನು ಹಾರಿಸುವಾಗ ಅದು ಹರಿಯದಂತೆ ನೋಡಿಕೊಳ್ಳಬೇಕು. ಕೆಳಗೆ ಬೀಳಿಸಬಾರದು, ಧ್ವಜವನ್ನು ಸರಿಯಾದ ಸ್ಥಳದಲ್ಲಿ ಹಾರಿಸಬೇಕು

2. ರಾಷ್ಟ್ರಧ್ವಜವನ್ನು ಹಾರಿಸುವ ಎತ್ತರದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ಬೇರೆ ಯಾವುದೇ ಧ್ವಜವನ್ನು ಹಾರಿಸತಕ್ಕದ್ದಲ್ಲ

3. ರಾಷ್ಟ್ರ ಧ್ವಜವನ್ನು ಯಾವುದೇ ಕಾರಣಕ್ಕೂ ಅಲಂಕಾರಕ್ಕಾಗಿ ಬಳಸಬಾರದು

4. ಧ್ವಜವನ್ನು ಹಾರಿಸುವಾಗ, ಕೇಸರಿ ಬಣ್ಣ ಮೇಲ್ಭಾಗದಲ್ಲಿ ಇರುವಂತೆ ನೋಡಿಕೊಳ್ಳಬೇಕು

5. ಹೂಗಳು, ಎಲೆಗಳು ಮತ್ತು ಹೂಮಾಲೆಗಳನ್ನು ಧ್ವಜ ಸ್ತಂಭದ ಮೇಲೆ ಅಥವಾ ಧ್ವಜದ ಮೇಲೆ ಇಡಬಾರದು

6. ಧ್ವಜದ ಮೇಲೆ ಏನನ್ನೂ ಬರೆಯಬಾರದು. ಧ್ವಜವನ್ನು ಯಾವುದೇ ವಸ್ತುವನ್ನು ಮುಚ್ಚಲು ಬಳಸಬಾರದು

7. ಧ್ವಜವನ್ನು ಹಾರಿಸಲು ತಯಾರಿ ನಡೆಸುವಾಗ, ಅಗತ್ಯವಿದ್ದರೆ ಅದರಲ್ಲಿ ಹೂವುಗಳನ್ನು ಇಡಬಹುದು

8. ರಾಷ್ಟ್ರಧ್ವಜವನ್ನು ನೆಲದ ಮೇಲೆ ಎಸೆಯಬಾರದು ಅಥವಾ ನೀರಿನ ಮೇಲೆ ತೇಲಿಸಬಾರದು

9. ಧ್ವಜವನ್ನು ನಾವು ಧರಿಸುವ ಬಟ್ಟೆಗಳಲ್ಲಿ ಹೊಲಿಯಬಾರದು, ಸೊಂಟದ ಕೆಳಭಾಗಕ್ಕೆ ಸುತ್ತಬಾರದು, ಕರವಸ್ತ್ರವಾಗಿ, ಸೋಫಾ ಕವರ್ ಆಗಿ, ನ್ಯಾಪ್ಕಿನ್ ಆಗಿ ಅಥವಾ ಒಳಉಡುಪಾಗಿ ಬಳಸಬಾರದು

10. ಧ್ವಜವನ್ನು ಹಾರಿಸುವಾಗ  ಅದು ಧ್ವಜ ಸ್ತಂಭದ ಬಲಗಡೆಯಲ್ಲಿ ಹಾರುವಂತಿರಬೇಕು

Share Post