ಸ್ಪೇನ್‌ನಲ್ಲಿ ಮಾರಣಾಂತಿಕವಾದ ಬಿಸಿ ಗಾಳಿ; ಒಂದೇ ದಿನ 150 ಮಂದಿ ದುರ್ಮರಣ
ಮ್ಯಾಡ್ರಿಡ್; ಭಾರತದಲ್ಲಿ ವರುಣನ ಅವಾಂತರ ಸೃಷ್ಟಿಯಾಗಿದೆ. ಕೆಲವು ಕಡೆ ಮಳೆ ಕಡಿಮೆಯಾದರೆ ಸಾಕಪ್ಪ ಎಂದು ಜನ ಪರಿತಪಿಸುತ್ತಿದ್ದಾರೆ. ಇದೇ ವೇಳೆ ಯೂರೋಪ್‌ನ ಕೆಲ ದೇಶಗಳಲ್ಲಿ ಬಿಸಿ ಗಾಳಿಗೆ ಜನ ತತ್ತರಿಹೋಗಿದ್ದಾರೆ. ಬಿಸಿ ಗಾಳಿ ಹಾಗೂ ಸೆಖೆಗೆ ತಾಳಲಾರದೇ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಕಳೆದ 24 ಗಂಟೆಗಳಲ್ಲಿ ಸ್ಪೇನ್ ಒಂದಲ್ಲೇ ಸುಮಾರು 150 ಮಂದಿ ಹೀಟ್ ವೇವ್‌ಗೆ ಬಲಿಯಾಗಿದ್ದಾರೆ.
ಸ್ಪೇನ್ ಹಲವು ಭಾಗಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ದಾಖಲಾಗಿದ್ದು, ಜನರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಸೆಖೆಗೆ ತಡೆಯಲಾರದೇ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಜುಲೈ 10 ಮತ್ತು 16 ರ ನಡುವೆ ಹೀಟ್ ವೇವ್ ಅತ್ಯಂತ ಅಧಿಕವಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. .
ಸಿಸ್ಟಮ್ ಆಫ್ ಮಾನಿಟರೈಸೇಶನ್ ಆಫ್ ಡೈಲಿ ಮಾರ್ಟಲಿಟಿ ಪ್ರಕಾರ, ದೇಶದಲ್ಲಿ ತಾಪಮಾನ ಉಲ್ಬಣಗೊಂಡಂತೆ ಶಾಖ ಸಂಬಂಧಿತ ಸಾವುಗಳ ಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಜುಲೈ 10 ರಿಂದ 13 ರವರೆಗಿನ ನಾಲ್ಕು ದಿನಗಳಲ್ಲಿ ಸಾವಿನ ಸಂಖ್ಯೆ 15 ರಿಂದ 60 ಕ್ಕೆ ಅಂದರೆ, 4 ಪಟ್ಟು ಹೆಚ್ಚಾಗಿದೆ. ಗುರುವಾರ 93 ಆದರೆ, ಅದು ಶುಕ್ರವಾರಕ್ಕೆ 123 ಸಾವಿಗೆ ಏರಿಕೆ ಕಂಡಿತು. ಶನಿವಾರದಂದು 150 ಸಾವು ದಾಖಲಾಗಿ ಪರಾಕಾಷ್ಠೆಗೆ ತಲುಪಿದೆ ಎಂದು ಮಾಹಿತಿ ನೀಡಿದೆ.