ತೆಲಂಗಾಣದಲ್ಲಿ ದಾರುಣ ಘಟನೆ; ವಿದ್ಯುತ್ ಸ್ಪರ್ಶಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ
ಕಾಮರೆಡ್ಡಿ; ತೆಲಂಗಾಣದಲ್ಲಿ ಕಾಮರೆಡ್ಡಿ ಜಿಲ್ಲೆಯಲ್ಲಿ ದಾರುಣ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇದರಲ್ಲಿ ಇಬ್ಬರು ಪುಟ್ಟ ಮಕ್ಕಳೂ ಸೇರಿದ್ದಾರೆ.
ಕಾಮರೆಡ್ಡಿಯ ಬೀಡಿ ವರ್ಕರ್ಸ್ ಕಾಲೋನಿಯಲ್ಲಿ ಈ ದುರ್ಘಟನೆ ನಡೆದಿದೆ. ಆಟೋ ಚಾಲಕನಾದ ಕಾಲೋನಿಯ ಅಹಮದ್ (35), ಪತ್ನಿ ಪರ್ವೀನ್ (30), ಮಗಳು ಮಹಿಮ್ (6), ಮಕ್ಕಳಾದ ಫೈಜಾನ್ (5) ಮತ್ತು ಅದ್ನಾನ್ (3) ಸಣ್ಣ ಹುಲ್ಲಿನ ಮನೆಯಲ್ಲಿ ವಾಸಿಸುತ್ತಿದ್ದರು. ಮಳೆ ಕಾರಣಕ್ಕೆ ಶಾಲೆಗೆ ರಜೆ ನೀಡಲಾಗಿತ್ತು. ಫೈಜಾನ್ನನ್ನು ಅಜ್ಜಿ ಮನೆಯಲ್ಲಿ ಬಿಟ್ಟು, ಉಳಿದವರು ಮನೆಯಲ್ಲಿದ್ದರು.
ಮನೆಗೋಡೆಗೆ ಕಟ್ಟಿದ್ದ ಕಬ್ಬಿಣದ ತಂತಿ ಮೇಲೆ ಬಟ್ಟೆ ಒಣಗಿಸುತ್ತಿದ್ದಾಗ ಪರ್ವೀನ್ಗೆ ವಿದ್ಯುತ್ ಸ್ಪರ್ಶಿಸಿದೆ. ಕೂಡಲೇ ಆಕೆಯನ್ನು ರಕ್ಷಿಸಲು ಬಂದ ಅಹಮದ್ಗೂ ಶಾಕ್ ಹೊಡೆದಿದೆ. ತಂದೆ-ತಾಯಿ ಕುಸಿದು ಬೀಳುವುದನ್ನು ಕಂಡ ಮಗಳು ಮಹೀಮ್ ಮತ್ತು ಮಗ ಅದ್ನಾನ್ ಇಬ್ಬರೂ ಪೋಷಕರ ಬಳಿ ಹೋಗಿದ್ದಾರೆ. ಆಗ ಅವರಿಗೂ ವಿದ್ಯುತ್ ಸ್ಪರ್ಶಿಸಿದೆ.
ಮಕ್ಕಳ ಆಕ್ರಂದನ ಕೇಳಿದ ಅಕ್ಕಪಕ್ಕದ ಮನೆಯವರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ನಾಲ್ವರೂ ಪ್ರಾಣ ಕಳೆದುಕೊಂಡಿದ್ದರು ಎಂದು ತಿಳಿದುಬಂದಿದೆ.