ಅಧ್ಯಕ್ಷರ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ; ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜೀನಾಮೆ
ಕೊಲಂಬೊ; ಶ್ರೀಲಂಕಾದಲ್ಲಿ ಪ್ರತಿಭಟನೆ ಮುಂದುವರೆದಿದೆ. ಶನಿವಾರ ಅಧ್ಯಕ್ಷರ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ಅಲ್ಲೇ ಠಿಕಾಣಿ ಹೂಡಿದ್ದಾರೆ. ಅಲ್ಲೇ ಮೋಜು ಮಸ್ತಿ ಮಾಡುತ್ತಿದ್ದಾರೆ. ಇತ್ತ ನಾಪತ್ತೆಯಾಗಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಗೆ ರಾಜೀನಾಮೆ ಪತ್ರ ರವಾನಿಸಲಾಗಿದ್ದು, ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ.
ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ಜುಲೈ 13 ರಂದು ಅಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಘೋಷಿಸಿದ್ದರು. ಆದ್ರೆ ಶನಿವಾರ ಶ್ರೀಲಂಕಾ ಅಧ್ಯಕ್ಷರ ನಿವಾಸಕ್ಕೆ ಸಾವಿರಾರು ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ರಾಜೀನಾಮೆಗೆ ಆಗ್ರಹಿದ ಹಿನ್ನೆಲೆಯಲ್ಲಿ ಇಂದು ಅಧಿಕೃತವಾಗಿ ರಾಜಪಕ್ಸ ರಾಜೀನಾಮೆ ನೀಡಿದ್ದಾರೆ.
ಇತ್ತ, ಶ್ರೀಲಂಕಾ ಅಧ್ಯಕ್ಷರ ಅರಮನೆ ಮತ್ತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಅಧಿಕೃತ ನಿವಾಸ ಟೆಂಪಲ್ ಟ್ರೀ ಅನ್ನು ಆಕ್ರಮಿಸಿಕೊಂಡಿರುವ ಪ್ರತಿಭಟನಾಕಾರರು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಅಧ್ಯಕ್ಕರ ಮನೆಯ ಆವರಣದಲ್ಲಿಯೇ ಅಡುಗೆ ಮಾಡಿದ್ದಾರೆ.