ರಾಜೀನಾಮೆ ನೀಡಲು ಒಪ್ಪಿಗೆ ಸೂಚಿಸಿದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್
ಲಂಡನ್; ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಮುಂದಿನ ಪ್ರಧಾನಿ ಆಯ್ಕೆಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುವುದಾಗಿ ಅವರು ತಿಳಿಸಿದ್ದಾರೆ.
ಹಲವು ಸಚಿವರು ರಾಜೀನಾಮೆ ಸಲ್ಲಿಸಿದ್ದರೂ, ಪ್ರಧಾನಿ ಹುದ್ದೆ ತೊರೆಯುವುದಿಲ್ಲ ಎಂದು ಜಾನ್ಸನ್ ಪಟ್ಟು ಹಿಡಿದಿದ್ದರು. ರಿಷಿ ಸುನಕ್ ಸಹಿತ ಎಂಟು ಹಿರಿಯ ಸಚಿವರು ಮತ್ತು ಐವರು ಕಿರಿಯ ಸಚಿವರು ಸರ್ಕಾರದಿಂದ ಹೊರ ನಡೆದ ಬಳಿಕ ಬೋರಿಸ್ ಜಾನ್ಸನ್ ರಾಜೀನಾಮೆ ನೀಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಬೆಳವಣಿಗೆಯು ಹೊಸ ಪ್ರಧಾನಿ ಆಯ್ಕೆಯ ಚುನಾವಣೆಗೆ ದಾರಿ ಮಾಡಿಕೊಟ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಜಾನ್ಸನ್ ಅವರ ಸ್ಥಾನಕ್ಕೆ ಪ್ರಮುಖವಾಗಿ ಇರಾಕ್ ಸಂಜಾತ ನಧೀಂ ಜಹಾವಿ ಅವರು ಸ್ಪರ್ಧೆಯಲ್ಲಿದ್ದಾರೆ. ರಿಷಿ ಸುನಕ್ ಸ್ಥಾನಕ್ಕೆ ಜಹಾವಿ ಅವರನ್ನು ನೇಮಿಸಲಾಗಿತ್ತು. ಇದರ ಬೆನ್ನಲ್ಲೇ ಜಹಾವಿ ಅವರು ‘ಪ್ರಧಾನಿಯವರೆ ನಿಮ್ಮ ಹೃದಯಕ್ಕೆ ಸರಿಯೇನು ಎಂಬುದು ಗೊತ್ತಿದೆ. ಈಗ ಹೊರಟು ಹೋಗಿ’ ಎಂದು ಸಾರ್ವಜನಿಕವಾಗಿ ಪತ್ರ ಬರೆದಿದ್ದಾರೆ.