ಶಾಲೆಗಳ ದುಸ್ಥಿತಿ ಸರಿಪಡಿಸಲು ತಿಂಗಳು ಗಡುವು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಹಾಗೂ ಶಾಲಾ ಕಟ್ಟಡಗಳನ್ನು ದುರಸ್ತಿ ಮಾಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ರಾಜ್ಯ ಸರಕಾರಕ್ಕೆ ಒಂದು ತಿಂಗಳು ಗಡುವು ನೀಡಿದ್ದಾರೆ.
ಸರಕಾರಿ ಪ್ರಾಥಮಿಕ ಹಾಗೂ ಕಿರಿಯ ಶಾಲೆಗಳ ದುಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಅವರು, ಈ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಕರ್ನಾಟಕದ ಸರ್ಕಾರಿ ಶಾಲೆಗಳ ದೃಶ್ಯವೈಭವ!! ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
‘ಶಾಲೆಗಳ ಮಾಳಿಗೆಗಳು ಸೋರುತ್ತಿವೆ. ಗೋಡೆಗಳು ಬಣ್ಣಗೆಟ್ಟಿವೆ. ಕಿಟಕಿ, ಬಾಗಿಲು ಹಾಳಾಗಿವೆ. ಕುಡಿಯಲು ನೀರಿಲ್ಲ. ಮಕ್ಕಳಿಗೆ ಶೌಚಾಲಯವೂ ಇಲ್ಲ. ಮಕ್ಕಳ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಬಣ್ಣಗೇಡು ವರಸೆಗೆ ಇದು ತಾಜಾ ಉದಾಹರಣೆ. ಹೇಳುವುದು ಒಂದು, ಮಾಡುವುದು ಇನ್ನೊಂದು. ಶಿಕ್ಷಣ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ಮಕ್ಕಳ ಕಲಿಕೆಯಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. ಪಠ್ಯಕ್ಕೆ ಕೇಸರಿ ಬಳಿದು ಕತ್ತರಿ ಹಾಕುವ ಅಕ್ಷರದ್ರೋಹಿ ಬಿಜೆಪಿ ಸರಕಾರಕ್ಕೆ ಬಣ್ಣಗೆಟ್ಟ ಶಾಲೆಗಳ ಗೋಡೆಗಳೇ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.
ಪತ್ರಿಕೆಯೊಂದು ಬಿಜೆಪಿ ಸರ್ಕಾರದ ಗೋಮುಖವ್ಯಾಘ್ರ ಮುಖವನ್ನು ಬೆತ್ತಲುಗೊಳಿಸಿದೆ. ಸೋರುತ್ತಿರುವ ಶಾಲೆಗಳನ್ನು ಮುಖಕ್ಕೆ ರಾಚುವಂತೆ ತೋರಿಸಿದೆ. ರಾಜ್ಯದಲ್ಲಿ 75,675 ಶಾಲೆ ಕೊಠಡಿಗಳು ಶಿಥಿಲವಾಗಿವೆ. ಇಲ್ಲಿ ಶಿಥಿಲ ಆಗಿರುವುದು ಕರ್ನಾಟಕದ ಹೆಮ್ಮೆ ಎಂದು ಅವರು ಕಿಡಿಕಾರಿದ್ದಾರೆ.
224 ವಿಧಾನಸಭೆ ಕ್ಷೇತ್ರಗಳ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಲಕ್ಷಾಂತರ ಮಕ್ಕಳು ಜೀವ ಅಂಗೈಯಲ್ಲಿಟ್ಟುಕೊಂಡು ಕಲಿಯುತ್ತಿದ್ದಾರೆ. ಅವರಿಗೆ ಶಾಲೆಯೇ ಶಿಕ್ಷೆಯಾಗಿದೆ. ಶಿಕ್ಷಣ ಇಲಾಖೆ ಅದಕ್ಷತೆಯ ಕೂಪ ಎನ್ನುವುದಕ್ಕೆ ಇದೇ ಸಾಕ್ಷಿ. ಶಿಕ್ಷಣ ಸಚಿವರು, ಆ ಇಲಾಖೆಯ ಅಧಿಕಾರಿಗಳ ಪರಮ ಬೇಜವಾಬ್ದಾರಿಯ ಪರಾಕಾಷ್ಠೆ ಇದು ಎಂದು ಹೆಚ್ ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.