ಮಹಾ ರಾಜಕೀಯ; 16 ಶಾಸಕರ ಅನರ್ಹತೆ ವಿಚಾರಕ್ಕೆ ತಾತ್ಕಾಲಿಕ ತಡೆ
ಮುಂಬೈ; ಮಹಾರಾಷ್ಟ್ರ ಸರ್ಕಾರದ ವಿರುದ್ಧ ಬಂಡಾಯವೆದ್ದಿರುವ ಶಾಸಕರಲ್ಲಿ 16 ಮಂದಿ ವಿರುದ್ಧ ನೀಡಿದ್ದ ಅನರ್ಹತೆ ನೋಟಿಸ್‌ಗೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಂಡಾಯವೆದ್ದಿರುವ ಹಿನ್ನೆಲೆಯಲ್ಲಿ ನಿಮ್ಮನ್ನು ಯಾಕೆ ಅನರ್ಹತೆಗೊಳಿಸಬಾರದು ಎಂದು ಡೆಪ್ಯುಟಿ ಸ್ಪೀಕರ್ ನೋಟಿಸ್ ನೀಡಿದ್ದರು. ಇಂದು ಸಂಜೆಯೊಳಗೆ ಉತ್ತರಸುವಂತೆ ಸೂಚಿಸಲಾಗಿತ್ತು. ಆದ್ರೆ ಬಂಡಾಯ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಅನರ್ಹತೆ ವಿಚಾರ ಸಂಬಂಧ ನಿರ್ಧಾರ ಕೈಗೊಳ್ಳುವುದಕ್ಕೆ ತಾತ್ಕಾಲಿಕ ತಡೆ ನೀಡಿದೆ.
ಬಂಡಾಯ ಶಾಸಕರ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಜುಲೈ 11 ವಿಚಾರಣೆ ಮುಂದೂಡಿದೆ. ಅಲ್ಲಿಯವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಂತೆ ಡೆಪ್ಯೂಟಿ ಸ್ಪೀಕರ್‌ಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಅಲ್ಲದೆ ಮಹಾರಾಷ್ಟ್ರ ಸರ್ಕಾರ ಹಾಗೂ ಡೆಪ್ಯುಟಿ ಸ್ಪೀಕರ್‌ಗೆ ನೋಟಿಸ್ ಜಾರಿ ಮಾಡಿದೆ. ಈ ನಡುವೆ ಸಿಎಂ ಉದ್ಧವ್ ಠಾಕ್ರೆ ಬಂಡಾಯ ಸಚಿವರ ವಿರುದ್ಧ ಮೊದಲ ಕ್ರಮ ಕೈಗೊಂಡಿದ್ದಾರೆ. ಬಂಡಾಯ ಶಾಸಕರ ನಾಯಕ ಏಕನಾಥ್ ಶಿಂಧೆ ಮತ್ತು ಇತರ ಸಚಿವರ ಖಾತೆಗಳನ್ನು ಹಿಂಪಡೆದಿರುವ ಉದ್ಧವ್, ಮಂತ್ರಿ ಪರಿಷತ್ತಿನ ಇತರೆ ಸಚಿವರಿಗೆ ಹಂಚಿಕೆ ಮಾಡಿದ್ದಾರೆ.
ಶಿಂಧೆ ಅವರ ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಖಾತೆಯನ್ನು ಶಿವಸೇನೆಯ ಹಿರಿಯ ಮುಖಂಡ ಸುಭಾಷ್ ದೇಸಾಯಿ ಅವರಿಗೆ ಹಂಚಿಕೆ ಮಾಡಲಾಗಿದೆ. ಗುಲಾಬ್ ರಾವ್ ಪಾಟೀಲ್ ಅವರ ನೀರು ಸರಬರಾಜು ಮತ್ತು ನೈರ್ಮಲ್ಯ ಖಾತೆಯನ್ನು ಅನಿಲ್ ಪರಬ್ ಅವರಿಗೆ ಹಸ್ತಾಂತರಿಸಲಾಗಿದೆ. ಏಕನಾಥ್ ಶಿಂಧೆ ಮತ್ತು ಗುಲಾಬ್ ರಾವ್ ಅವರು ಈಗ ಖಾತೆ ಇಲ್ಲದ ಸಚಿವರಾಗಿದ್ದಾರೆ.