ಶರದ್ ಪವಾರ್ ಬಗ್ಗೆ ಅವಹೇಳನ; ಮರಾಠಿ ನಟಿ ಕೇತಕಿ ಜೈಲಿಂದ ಬಿಡುಗಡೆ
ಮುಂಬೈ; ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಧ್ಯಕ್ಷ ಶರದ್ ಪವಾರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಮರಾಠಿ ನಟಿ ಕೇತಕಿ ಚಿತಳೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ನಟಿ, ಸರಿಯಾದ ಸಮಯದಲ್ಲಿ ಮಾತನಾಡುತ್ತೇನೆ. ಜೈ ಹಿಂದ್, ಜೈ ಮಹಾರಾಷ್ಟ್ರ ಎಂದಷ್ಟೇ ಹೇಳಿದ್ದಾರೆ.
ಮೇ ತಿಂಗಳಲ್ಲಿ ಫೇಸ್ಬುಕ್ನಲ್ಲಿ ಮರಾಠಿ ಭಾಷೆಯಲ್ಲಿ ಪೋಸ್ಟ್ವೊಂದನ್ನು ಕೇತಕಿ ಚಿತಳೆ ಹಾಕಿದ್ದರು. ಅದ್ರಲ್ಲಿ ಪವಾರ್ ಹೆಸರನ್ನು ನಮೂದಿಸಿ, ‘ನೀವು ಬ್ರಾಹ್ಮಣರನ್ನು ದ್ವೇಷಿಸುತ್ತೀರಿ. ನಿಮಗಾಗಿ ನರಕ ಕಾಯುತ್ತಿದೆ’ ಎಂದು ಬರೆದಿದ್ದರು. ಈ ಸಂಬಂಧ ಸ್ವಪ್ನಿಲ್ ನೆಟ್ಕೆ ಎಂಬುವರು ದೂರು ನೀಡಿದ್ದರು. ಥಾಣೆಯ ಪೊಲೀಸರು ಮೇ 14ರಂದು ಚಿತಳೆ ಅವರನ್ನು ಬಂಧಿಸಿದ್ದರು. ಮುಂಬೈನ ಭೋಯಿವಾಡ ಪೊಲೀಸ್ ಠಾಣೆಯಲ್ಲಿ ಕೇತಕಿ ಚಿತಳೆ ವಿರುದ್ಧ ಐಪಿಸಿ ಸೆಕ್ಷನ್ 153A, 500, 501 ಮತ್ತು 504, 506 ಮತ್ತು 34 ರ ಅಡಿಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಇದೇ ತಿಂಗಳ 16ರಂದು ಕೇತಕಿ ಅವರಿಗೆ ಜಾಮೀನು ಮಂಜೂರಾಗಿತ್ತು.