ʻಮಹಾʼ ವಿಧಾನಸಭೆ ವಿಸರ್ಜನೆಯಾಗುತ್ತಾ..?; ಸಂಜಯ್ ರಾವುತ್ ಟ್ವೀಟ್ ಮರ್ಮ ಏನು..?
ಮುಂಬೈ; ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರಕ್ಕೆ ಶಿವಸೇನೆಯ ಸಚಿವ ಏಕನಾಥ್ ಶಿಂಧೆ ಬಂಡುಕೋರ ಶಾಸಕರು ಕಂಟಕವಾಗಿ ಪರಿಣಮಿಸಿದ್ದಾರೆ. ಏಕನಾಥ್ ಶಿಂಧೆ ಜೊತೆ 40 ಶಾಸಕರಿದ್ದು ಅವರು ಈಗಾಗಲೇ ಗುವಾಹಟಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ನಡುವೆ ಶಿವಸೇನೆ ಹಿರಿಯ ನಾಯಕ ಹಾಗೂ ಸಂಸದ ಸಂಜಯ್ ರಾವುತ್ ಟ್ವೀಟ್ ಒಂದನ್ನು ಮಾಡಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಮರಾಠಿಯಲ್ಲಿ ಒಂದೇ ಸಾಲಿನ ಟ್ವೀಟ್..
‘ವಿಧಾನಸಭೆಯ ವಿಸರ್ಜನೆಯತ್ತ ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳ ಪಯಣ’ ಎಂದು ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಈಗ ಮಹಾರಾಷ್ಟ್ರ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಜೊತೆಗೆ ದೇಶದ ರಾಜಕೀಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇನ್ನು ಇದಕ್ಕೂ ಮೊದಲು ಮಾತನಾಡಿರುವ ಸಂಜಯ್ ರಾವುತ್, ಏಕನಾಥ್ ಶಿಂಧೆ ನಮ್ಮ ಪಕ್ಷದ ಅತಿ ಹಿರಿಯ ಸದಸ್ಯರು. ಅವರು ನಮ್ಮ ಸ್ನೇಹಿತರು. ನಾವು ದಶಕಗಳಿಂದ ಜತೆಯಾಗಿ ಕೆಲಸ ಮಾಡಿದ್ದೇವೆ. ಅಷ್ಟು ಸುಲಭವಾಗಿ ಬೇರೆಯಾಗುವುದು ಅವರಿಗೂ ನಮಗೂ ಸುಲಭವಲ್ಲ. ಅವರ ಜತೆ ಇಂದು ಬೆಳಿಗ್ಗೆ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದೇನೆ. ಪಕ್ಷದ ಅಧ್ಯಕ್ಷರಿಗೂ ಈ ಬಗ್ಗೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಈ ನಡುವೆ ಏಕನಾಥ್ ಅವರು ಕೂಡಾ ಮಾತನಾಡಿದ್ದು, ನಾನು ಶಿವಸೇನೆ ಪಕ್ಷದಲ್ಲೇ ಇದ್ದೇನೆ. ತಮಗೆ 40 ಶಾಸಕರ ಬೆಂಬಲ ಇದೆ ಎಂದು ತಿಳಿಸಿದ್ದಾರೆ.