ಪಕ್ಕದ ಮನೆಯವಳಿಂದ ಕಿಡ್ನ್ಯಾಪ್; ಬಾಲಕನನ್ನು ರಕ್ಷಿಸಿದ ಪೊಲೀಸರು
ಬೆಂಗಳೂರು; ಕಿಡ್ನಾಪ್ ಆಗಿದ್ದ ಬಾಲಕನನ್ನು ಹೆಣ್ಣೂರು ಪೊಲೀಸರು ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ರಕ್ಷಣೆ ಮಾಡಿದ್ದಾರೆ. ನಿನ್ನೆ ಸಂಜೆ ಹನ್ನೊಂದು ವರ್ಷದ ಬಾಲಕನನ್ನು ದುಷ್ಕರ್ಮಿಗಳು ಹೆಣ್ಣೂರಿನಿಂದ ಕಿಡ್ನ್ಯಾಪದ್ ಮಾಡಿದ್ದರು. ಆದ್ರೆ ದೂರು ಸ್ವೀಕರಿಸಿದ ಕೆಲವೇ ಗಂಟೆಗಳನ್ನು ಹೆಣ್ಣೂರು ಪೊಲೀಸರು, ಬಾಲಕನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಎಂಟಿಸಿ ಚಾಲಕ ಸುಭಾಷ್ ಪುತ್ರನೇ ಕಿಡ್ನ್ಯಾಪ್ ಆಗಿದ್ದ ಬಾಲಕ. ಬಾಲಕನ್ನು ಹೊತ್ತೊಯ್ದ ದುಷ್ಕರ್ಮಿಗಳು ಪೋಷಕರಿಗೆ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹೀಗಾಗಿ ರಾತ್ರಿ 9 ಗಂಟೆ ಸುಮಾರಿಗೆ ಸುಭಾಷ್ ಅವರು ತನ್ನ ಮಗ ಕಿಡ್ನ್ಯಾಪ್ ಆಗಿರುವ ಬಗ್ಗೆ ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಬಾಲಕನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕರೆ ಬಂದ ಫೋನ್‌ನ ಲೊಕೇಷನ್ ಟ್ರೇಸ್ ಮಾಡಿದಾಗ ಜಿಗಣಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಅಡಗಿರುವುದು ಗೊತ್ತಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಹೋಗಿ ಕಾಂಪೌಂಡ್ ಹಾರಿ, ಫಾರ್ಮ್‌ಹೌಸ್ ಪ್ರವೇಶ ಮಾಡಿದ್ದರು. ಈ ವೇಳೆ ಬಾಲಕ ಅಲ್ಲಿ ಪತ್ತೆಯಾಗಿದ್ದಾನೆ. ನೆರೆಮನೆಯ ಮಹಿಳೆಯೇ ಬಾಲಕನನ್ನು ಕರೆದುಕೊಂಡು ಹೋಗಿ, ಫಾರ್ಮ್ ಹೌಸ್‌ನ ಸೆಕ್ಯೂರಿಟಿ ಗಾರ್ಡ್ ಬಳಿ ಬಾಲಕನನ್ನು ಬಿಟ್ಟಿದ್ದಳು ಎಂದು ಗೊತ್ತಾಗಿದೆ. ಮಹಿಳೆ ಪರಾರಿಯಾಗಿದ್ದಾಳೆ. ಸೆಕ್ಯೂರಿಟಿ ಗಾರ್ಡ್‌ನನ್ನು ಬಂಧಿಸಲಾಗಿದೆ.