Bengaluru

ರಾಜ್ಯಸಭಾ ಚುನಾವಣೆ; ಕೈ ಅಭ್ಯರ್ಥಿ ನಾಮಪತ್ರ ಹಿಂತೆಗೆಸಲು ಜೆಡಿಎಸ್‌ ಶತಪ್ರಯತ್ನ

ಬೆಂಗಳೂರು; ಜೂನ್‌ ಹತ್ತರಂದು ನಡೆಯುವ ರಾಜ್ಯಸಭಾ ಚುನಾವಣೆಯ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನ. ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಹಿಂಪಡೆಯುವ ಅವಧಿ ಮುಗಿಯಲಿದೆ. ಇಂತಹ ಸಂದರ್ಭದಲ್ಲೂ ರಾಜಕೀಯ ಮೇಲಾಟ ಜೋರಾಗಿ ನಡೆಯುತ್ತಿದೆ. ಕಾಂಗ್ರೆಸ್‌ನ ಎರಡನೇ ಅಬ್ಯರ್ಥಿಯ ನಾಮಪತ್ರ ವಾಪಸ್‌ ತೆಗೆಸಲು ಜೆಡಿಎಸ್‌ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.

ನಾಮಪತ್ರ ಸಲ್ಲಿಸಿರುವ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ವಿಧಾನಸೌಧಕ್ಕೆ ಆಗಮಿಸಿದ್ದು, ಕೆಲ ಜೆಡಿಎಸ್‌ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಇನ್ನೊಂದೆಡೆ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ಕಾಂಗ್ರೆಸ್‌ ಹೈಕಮಾಂಡ್‌ ಮನವೊಲಿಸೋ ಪ್ರಯತ್ನ ಮುಂದುವರೆಸಿದ್ದಾರೆ.

ಈ ನಡುವೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಅಭ್ಯರ್ಥಿಯನ್ನು ವಾಪಸ್‌ ಪಡೆಯವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಜೆಡಿಎಸ್‌ ನಾಯಕರು ಸೋನಿಯಾಗಾಂಧಿಯವರನ್ನು ಸಂಪರ್ಕಿಸಿ, ಅವರ ಮನವೊಲಿಸಿ, ಅವರಿಂದ ರಾಜ್ಯದ ನಾಯಕರಿಗೆ ಸೂಚನೆ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಆದ್ರೆ ರಾಜ್ಯ ಕಾಂಗ್ರೆಸ್‌ ನಾಯಕರು ಮಾತ್ರ ನಮ್ಮ ಅಭ್ಯರ್ಥಿಗೇ ಬೆಂಬಲಿಸಿ ಎಂದು ಜೆಡಿಎಸ್‌ ನಾಯಕರಿಗೆ ಹೇಳುತ್ತಿದ್ದಾರೆ ಎನ್ನಲಾಗಿದೆ.

ಇನ್ನು ಇಬ್ಬರ ಜಗಳದಲ್ಲಿ ನಮಗೆ ಲಾಭವಾಗಬಹುದು ಎಂದು ಬಿಜೆಪಿ ಕಾದುನೋಡುವ ತಂತ್ರಕ್ಕೆ ಮುಂದಾಗಿದೆ.

Share Post