ಖ್ಯಾತ ಗಾಯಕ ಕೆಕೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ
ನವದೆಹಲಿ; ಹಿಂದಿ, ಕನ್ನಡ ಸೇರಿ ಹಲವಾರು ಭಾಷೆಗಳಲ್ಲಿ ನೂರಾರು ಹಾಡುಗಳನ್ನು ಹಾಡಿದ್ದ ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕೆಕೆ ಎಂದೇ ಖ್ಯಾತರಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ ಅವರ ಅಕಾಲಿಕ ನಿಧನ ನನಗೆ ನೋವು ತಂದಿದೆ. ಎಲ್ಲಾ ಸ್ತರದ ಜನರ ಭಾವನೆಗಳಿಗೆ ಮುಟ್ಟುವಂತಹ ಹಾಡುಗಳನ್ನು ಅವರು ಹಾಡಿದ್ದರು. ಕೆಕೆ ಇಲ್ಲದಿರಬಹುದು. ಆದ್ರೆ ಅವರನ್ನು ಹಾಡುಗಳ ಮೂಲಕ ನಾವು ಸದಾ ಸ್ಮರಿಸುತ್ತೇವೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ಸಂತಾಪ. ಓಂ ಶಾಂತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೆಕೆ ಪ್ರತಿಭಾವಂತ ಮತ್ತು ಬಹುಮುಖ ಪ್ರತಿಭೆಯ ಗಾಯಕರಾಗಿದ್ದರು. ಅವರ ಅಕಾಲಿಕ ನಿಧನ ಅತ್ಯಂತ ದುಃಖಕರ ಸಂಗತಿ. ಕೆಕೆ ನಿಧನದಿಂದ ಭಾರತೀಯ ಸಂಗೀತಕ್ಕೆ ಅಪಾರ ನಷ್ಟವಾಗಿದೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ ಶಾಂತಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಕುಮಾರ್ ಕುನ್ನತ್ ಅವರು ಕೋಲ್ಕತ್ತದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಸಿ ಹೋಟೆಲ್ ತಲುಪಿದ ಮೇಲೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.