BengaluruPolitics

ರಾಜ್ಯಸಭಾ ಚುನಾವಣೆ; ನಾಲ್ಕನೇ ಸ್ಥಾನಕ್ಕಾಗಿ ಬಿಗ್‌ ಫೈಟ್‌

ಬೆಂಗಳೂರು; ರಾಜ್ಯ ವಿಧಾನಸಸಭೆಯಿಂದ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿಯ ಇಬ್ಬರು ಹಾಗೂ ಕಾಂಗ್ರೆಸ್‌ನ ಒಬ್ಬರು ಗೆಲ್ಲೋದು ಪಕ್ಕಾ ಆಗಿದೆ. ಆದ್ರೆ ನಾಲ್ಕನೇ ಸ್ಥಾನಕ್ಕೆ ಕಾಂಗ್ರೆಸ್‌ ಬೆಂಬಲ ಪಡೆದು ಕುಪೇಂದ್ರ ರೆಡ್ಡಿಯನ್ನು ಗೆಲ್ಲಿಸಿಕೊಳ್ಳಲು ಜೆಡಿಎಸ್‌ ಪ್ಲ್ಯಾನ್‌ ಮಾಡಿತ್ತು. ಆದ್ರೆ ಸಿದ್ದರಾಮಯ್ಯ ಅವರು ಕೊನೆ ಕ್ಷಣದಲ್ಲಿ ಉರುಳಿಸಿರುವ ದಾಳದಿಂದಾಗಿ ಜೆಡಿಎಸ್‌ ಅಭ್ಯರ್ಥಿಗೆ ಸಂಕಷ್ಟ ಎದುರಾಗಿದೆ. ಇತ್ತ ಇಬ್ಬರ ಜಗಳ ಮೂರನೆಯವನಿಗೆ ಲಾಭ ಆಗುತ್ತೇನೋ ನೋಡೋಣ ಅಂತ ಬಿಜೆಪಿ ಕೂಡಾ ಲೆಹರ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದೆ.

ನಾಲ್ಕನೇ ಸ್ಥಾನಕ್ಕಾಗಿ ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ, ಕಾಂಗ್ರೆಸ್‌ನಿಂದ ಮನ್ಸೂರ್‌ ಅಲಿ ಖಾನ್‌ ಹಾಗೂ ಬಿಜೆಪಿಯಿಂದ ಲೆಹರ್‌ ಸಿಂಗ್‌ ಕಣದಲ್ಲಿದ್ದಾರೆ. ಆದ್ರೆ ಮೂವರಲ್ಲಿ ಯಾರಿಗೂ ಗೆಲುವಿಗೆ ಬೇಕಾದಷ್ಟು ಮತ ಪಡೆಯುವ ಬಲವಿಲ್ಲ. ಒಂದೋ ಕ್ರಾಸ್‌ ವೋಟಿಂಗ್‌ ನಡೆಯಬೇಕು, ಇಲ್ಲವೆ ಯಾವುದಾದರು ಅಭ್ಯರ್ಥಿ ಹಿಂದೆ ಸರಿದು, ಆ ಪಕ್ಷದ ಶಾಸಕರ ಬೆಂಬಲದೊಂದಿಗೆ ಮತ್ತೊಂದು ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಹೀಗಾಗಿ, ನಾಲ್ಕನೇ ಸ್ಥಾನಕ್ಕಾಗಿ ಕಿತ್ತಾಟ ಶುರುವಾಗಿದೆ.

ಕಾಂಗ್ರೆಸ್‌ ನಾಯಕರ ಒಪ್ಪಿಗೆ ಪಡೆದೇ ನಾವು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಆದ್ರೆ ಈಗ ಕಾಂಗ್ರೆಸ್‌ ಉಲ್ಟಾ ಹೊಡೆಯುತ್ತಿದೆ ಎಂದು ಜೆಡಿಎಸ್‌ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಪ್ರಧಾನಿ ದೇವೇಗೌಡರು, ಸೋನಿಯಾಗಾಂಧಿಯವರಿಗೆ ಕರೆ ಮಾಡಿ, ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ಮಾತುಕತೆಯಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು, ಸೋನಿಯಾಗಾಂಧಿ ಹಾಗೂ ಖರ್ಗೆ ಮಾತು ತಪ್ಪಿದ್ದಾರೆಂಬ ಜೆಡಿಎಸ್‌ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ದೇವೇಗೌಡರು ರಾಜ್ಯಸಭೆಗೆ ಆಯ್ಕೆಯಾಗುವಾಗ ನಾವು ಅಭ್ಯರ್ಥಿಯನ್ನು ಹಾಕಿರಲಿಲ್ಲ. ಅವರನ್ನು ನಾವು ಬೆಂಬಲಿಸಿದ್ದೆವು. ಈಗ ನಮಗೆ ರಾಜ್ಯಸಭೆಯಲ್ಲಿ ಶಕ್ತಿ ಬೇಕಾಗಿದೆ. ಹೀಗಾಗಿ ಜೆಡಿಎಸ್‌ ನಮ್ಮ ಅಭ್ಯರ್ಥಿಯನ್ನು ಬೆಂಬಲಿಸಲಿ ಎಂದು ಆಗ್ರಹಿಸಿದ್ದಾರೆ.

Share Post