ದೇವೇಗೌಡರ ಕುಟುಂಬವನ್ನು ಭೇಟಿ ಮಾಡಿದ ತೆಲಂಗಾಣ ಸಿಎಂ; ರಾಜಕೀಯ ವಲಯದಲ್ಲಿ ಕೂತೂಹಲ
ಬೆಂಗಳೂರು; ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಪ್ರಬಲವಾದ ಶಕ್ತಿ ಇಲ್ಲ. ಹೀಗಾಗಿ ತೆಲಂಗಾಣ ಸಿಎಂ ಚಂದ್ರಶೇಖರರಾವ್, ಥರ್ಡ್ ಫ್ರಂಟ್ ಗೆ ಮುನ್ನುಡಿ ಬರೆಯುತ್ತಿದ್ದಂತೆ ಕಾಣುತ್ತಿದೆ. ಈ ಕಾರಣದಿಂದಲೇ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಅದರ ಭಾಗವಾಗಿ ಇಂದು ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್ ಅಧ್ಯಕ್ಷ ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ.
ಕರ್ನಾಟಕಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿರುವ ಚಂದ್ರಶೇಖರ್ ರಾವ್ ಅವರು, ಹೆಚ್.ಡಿ. ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಈ ಭೇಟಿ ನಡೆಯಿತು. ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ಅನುಸರಿಸಬೇಕಾದ ಕಾರ್ಯತಂತ್ರಗಳ ಕುರಿತಂತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.