ಮಳಲಿ ಮಸೀದಿ ವಿಚಾರ; ಅಲ್ಲಿ ದೇವಸ್ಥಾನ ಇತ್ತು ಎಂದ ತಾಂಬೂಲ ಪ್ರಶ್ನೆ
ಮಂಗಳೂರು; ಇಲ್ಲಿನ ಮಳಲಿ ಮಸೀದಿಯಲ್ಲಿ ದೇವಾಲಯ ಶೈಲಿಯ ಕುರುಹುಗಳು ಕಂಡುಬಂದಿದೆ ಎಂದು ಹೇಳಲಾಗಿದ್ದು, ಈ ಬಗ್ಗೆ ಕೆಲ ದಿನಗಳಿಂದ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಮಳಲಿ ಮಸೀದಿಯ ಸಮೀಪದಲ್ಲಿರುವ ಶ್ರೀರಾಮಂಜನೇಯ ಭಜನಾ ಮಂದಿರದಲ್ಲಿ ತಾಂಬೂಲ ಪ್ರಶ್ನಾ ಚಿಂತನೆ ನಡೆಸಲಾಯಿತು. ತಾಂಬೂಲ ಪ್ರಶ್ನೆ ಹಾಕಿ ನೋಡಿದ ಕೇರಳದ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಎಂಬವರು, ಈ ಸ್ಥಳದಲ್ಲಿ ಹಿಂದೂ ಮಂದಿರ ಇತ್ತು ಎಂದು ಹೇಳಿದ್ದಾರೆ.
ಇದು ಯಾವುದೋ ಕಾಲದಲ್ಲಿ ಹಿಂದೂ ಧಾರ್ಮಿಕ ಸ್ಥಳ ಆಗಿತ್ತು. ಇಲ್ಲಿ ಈ ಹಿಂದೆ ದೇವಸ್ಥಾನ ಇತ್ತು. ಆದ್ರೆ ಯಾವುದೋ ವಿವಾದದ ಕಾರಣದಿಂದ ಈ ದೇವಸ್ಥಾನವನ್ನು ನಾಶ ಮಾಡಲಾಗಿದೆ ಎಂದು ತಾಂಬೂಲ ಪ್ರಶ್ನೆ ನೋಡಿ ಗೋಪಾಲಕೃಷ್ಣ ಪಣಿಕ್ಕರ್ ಹೇಳಿದ್ದಾರೆ. ಪುರಾತನ ಕಾಲದಲ್ಲಿ ಈ ಸ್ಥಳದಲ್ಲಿ ಗುರುಮಠದ ಸಾನಿಧ್ಯ ಇರುವುದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಹಿಂದಿನ ಕಾಲದಲ್ಲಿ ವಿವಾದದಿಂದ ನಾಶವಾಯಿತು. ಆ ಸಂದರ್ಭದಲ್ಲಿ ಒಂದು ಮರಣವೂ ಆಗಿದೆ. ನಾಶವಾದಾಗ ಈ ಸ್ಥಳದಲ್ಲಿ ಇದ್ದವರು ಇಲ್ಲಿಂದ ಹೋಗಿದ್ದಾರೆ. ಇಲ್ಲಿಂದ ಮಠವನ್ನು ಸಹ ಬೇರೆಡೆ ಸ್ಥಳಾಂತರ ಮಾಡಿದ್ದಾರೆ. ಆದರೆ, ಅವರು ಪೂರ್ಣವಾಗಿ ಕೊಂಡು ಹೋಗಿಲ್ಲ. ಅರ್ಧ ಸಾನಿಧ್ಯ ಇಲ್ಲಿಯೇ ಉಳಿದಿದೆ ಎಂದು ತಾಂಬೂಲ ಪ್ರಶ್ನೆಯಿಂದ ತಿಳಿದುಬಂದಿದೆ.
ಇದೀಗ ಈ ಜಾಗದ ಮಾಲಕತ್ವ ಹೊಂದಿರುವವರೂ ಸೇರಿದಂತೆ ಎಲ್ಲರೂ ಒಟ್ಟಾಗಿ ಜೀರ್ಣೋದ್ಧಾರ ಮಾಡಬೇಕು. ಇಲ್ಲದಿದ್ದರೆ ಊರಿಗೆ ಗಂಡಾಂತರವಿದೆ ಎಂದು ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದಿದೆ. ಈ ಪ್ರದೇಶದಲ್ಲಿ ಶಿವಕಲೆಯಿದೆ. ಅಲ್ಲಿ ಶಿವಸಾನಿಧ್ಯವಿದೆ. ಇದರ ಆರಾಧನೆ ಮಾಡಿದ ಪೂರ್ವಿಕರ ಮನೆಯಲ್ಲಿ ಈಗಲೂ ಪೂಜೆ ಮಾಡಲಾಗುತ್ತಿದೆ ಎಂಬುದು ತಿಳಿದುಬಂದಿದೆ.
ಏಪ್ರಿಲ್ 21ರಂದು ಮಂಗಳೂರಿನ ಹೊರವಲಯದ ಗಂಜಿಮಠ ಬಳಿಯ ಮಳಲಿ ಎಂಬಲ್ಲಿ ಮಸೀದಿ ನವೀಕರಣ ನಡೆಯುತ್ತಿದ್ದಾಗ ದೇಗುಲ ಶೈಲಿಯ ವಾಸ್ತುಶಿಲ್ಪ ಪತ್ತೆಯಾಗಿತ್ತು. ಆ ಬಳಿಕ ಯಾವುದೇ ಕಾಮಗಾರಿ ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.