ಮೊಬೈಲ್ ನೋಡಬೇಡ ಎಂದಿದ್ದಕ್ಕೆ ಕೋಪ; ಯುವತಿ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ; ಮೊಬೈಲ್ ಜಾಸ್ತಿ ನೋಡಬೇಡ ಎಂದು ಬೈದಿದ್ದಕ್ಕೆ ಹತ್ತೊಂಬತ್ತು ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರದ ಹೊರವಲಯದ ತಳಗವಾರ ಬಳಿ ನಡೆದಿದೆ.
ಜಯಶ್ರೀ ಎಂಬಾಕೆಯೇ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ರಾತ್ರಿ ಹನ್ನೊಂದು ಗಂಟೆಯಾದರೂ ಮೊಬೈಲ್ ನೋಡುತ್ತಲೇ ಇದ್ದಳು. ಬೆಳಗ್ಗೆ ಹತ್ತು ಗಂಟೆಯಾದರೂ ಮಲಗೇ ಇರುತ್ತಿದ್ದಳು. ಇದ್ರಿಂದ ಆಕ್ರೋಶ ಪೋಷಕರು, ಮೊಬೈಲ್ ನೋಡದಂತೆ ತಾಕೀತು ಮಾಡಿದ್ದರು. ಇದ್ರಿಂದ ಬೇಸತ್ತ ಜಯಶ್ರೀ, ಮೊಬೈಲ್ ಒಡೆದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಳು. ಜೊತೆಗೆ ಮನೆಯಿಂದ ಹೊರಗೆ ಹೋಗಿದ್ದಳು. ಬರುತ್ತಾಳೆ ಬಿಡು ಎಂದು ಸುಮ್ಮನಾಗಿದ್ದ ಪೋಷಕರಿಗೆ ಆಕೆ ಶವವಾಗಿ ಸಿಕ್ಕಿದ್ದಾಳೆ.
ಮೃತ ಜಯಶ್ರೀ ದೊಡ್ಡಬಳ್ಳಾಪುರದ ಬಸವೇಶ್ವರ ನಗರದ ನರಸಪ್ಪ ಹಾಗೂ ಜಯಲಕ್ಷ್ಮೀ ದಂಪತಿ ಪುತ್ರಿ. ಈ ದಂಪತಿಗೆ ಜಯಶ್ರೀ ಸೇರಿ ಇಬ್ಬರು ಹೆಣ್ಣಮಕ್ಕಳು, ಒಬ್ಬ ಮಗ ಇದ್ದಾನೆ. ತಂದೆ ನರಸಪ್ಪ ಆಟೋ ಓಡಿಸಿದರೆ, ತಾಯಿ ಜಯಲಕ್ಷ್ಮೀ ಕೂಲಿ ಕೆಲಸಕ್ಕೆ ಹೋಗುತ್ತಾರೆ.